ಬೆಳಗಾವಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಬೈಲಹೊಂಗಲ ತಾಲೂಕಿನ ಗರಜೂರ ಗ್ರಾಮ ಸೇರಿದಂತೆ ಈ ಭಾಗದಲ್ಲಿ ಕಟಾವಿಗೆ ಬಂದ ಸೊಯಾಬೀನ್ ಬೆಳೆ ಜಮೀನಿನಲ್ಲಿಯೇ ಕೊಳೆಯುವಂತಾಗಿದೆ.
ನೀರಲ್ಲಿಯೇ ಕಟಾವಿಗೆ ಮುಂದಾದ ಕೆಲ ರೈತ ಕುಟುಂಬಗಳು ಅಕಾಲಿಕ ಮಳೆಗೆ ತುತ್ತಾಗಿರುವ ಸೊಯಾಬೀನ್ ಬೆಳೆಯನ್ನು ರಕ್ಷಿಸಲು ಗರಜೂರ ಗ್ರಾಮದ ರಮೇಶ ಕಂಚಿಗಿಡದ ರೈತ ಕುಟುಂಬವೊಂದು ತನ್ನ ಜಮೀನಿನಲ್ಲಿ ನೀರು ನಿಂತರೂ ಕಟಾವಿಗೆ ಮುಂದಾಗಿದೆ. ಜಮೀನಿನಲ್ಲಿ ನಿಂತ ನೀರಿನಲ್ಲಿಯೇ ಸೊಯಾಬೀನ್ ಬೆಳೆ ಕಟಾವು ಮಾಡಲಾಗುತ್ತಿದೆ. ಅತಿಯಾದ ತೇವಾಂಶ ಹಾಗೂ ಜಮೀನಿನಲ್ಲಿ ನೀರು ನಿಲ್ಲುತ್ತಿರುವುದರಿಂದ ಕೊಳೆಯಲು ಆರಂಭಿಸಿದೆ.
ಕೆಲ ರೈತರು ಜಮೀನಿನಲ್ಲಿ ನೀರು ನಿಂತರೂ ದುಪ್ಪಟ್ಟು ಕೂಲಿ ನೀಡಿ, ಸೊಯಾಬೀನ್ ಬೆಳೆ ಕಟಾವು ಮಾಡಿಲಾಗುತ್ತಿದೆ. ಉತ್ತಮ ಮುಂಗಾರು ಹಿನ್ನೆಲೆಯಲ್ಲಿ ಜಮೀನಿನಲ್ಲಿ ಒಳ್ಳೆಯ ಫಸಲು ಬಂದಿತ್ತು ಎನ್ನಲಾಗಿದೆ. ಇನ್ನೇನು ಕಟಾವು ಆರಂಭಿಸಬೇಕು ಎನ್ನವಷ್ಟರಲ್ಲಿ ಮಳೆ ಆರಂಭವಾಗಿದೆ.
ಸದ್ಯ ರೈತ ಕುಟುಂಬಗಳು ಕಂಗಾಲಾಗಿದ್ದು, ಸಾವಿರಾರು ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. ಸಂಜೆಯಾಗುತ್ತಿದ್ದಂತೆ ಅಬ್ಬರಿಸುವ ವರುಣ ರಾತ್ರಿಯವರೆಗೆ ಸುರಿಯುತ್ತಿರುತ್ತದೆ. ಜಿಲ್ಲೆಯ ಬೈಲಹೊಂಗಲ, ಕಿತ್ತೂರು ಸೇರಿದಂತೆ ಸವದತ್ತಿ ತಾಲೂಕಿನಲ್ಲಿ ಹೆಚ್ಚಾಗಿ ಸೋಯಾಬೀನ್ ಬೆಳೆ ಹಾಗೂ ಹೆಸರು ಕಾಳು ಬೆಳೆಗಳನ್ನು ಬೆಳೆಯಲಾಗಿತ್ತು. ಬಹುತೇಕ ಸೊಯಾಬೀನ್ ಹಾಗೂ ಹೆಸರು ಕಾಳು ಬೆಳೆ ಗಿಡದಲ್ಲಿಯೇ ಮೊಳಕೆಯೊಡೆಯುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.