ಚಿಕ್ಕೋಡಿ:ಕೃಷ್ಣಾ ನದಿ ಬತ್ತಿ ಹೋಗಿ ಎರಡು ತಿಂಗಳುಗಳು ಕಳೆದಿದ್ದು, ನೀರಿಲ್ಲದೆ ಜನ, ಜಾನುವಾರಗಳಿಗೆ ತೊಂದರೆಯಾಗುತ್ತಿದೆ. ತಕ್ಷಣವೇ ಕೃಷ್ಣಾ ನದಿಗೆ ನೀರು ಹರಿಸಬೇಕೆಂದು ಸಿಎಂ ಅವರಿಗೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಬೇಡಿಕೆ ಮಂಡಿಸಿದ್ದಾರೆ.
ಬೆಂಗಳೂರು ವಿಧಾನಸೌಧದಲ್ಲಿ ಸಿಎಂ ಕುಮಾರಸ್ವಾಮಿ ಇವರನ್ನು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಹಾಗೂ ರೈತ ಮುಖಂಡರು ಭೇಟಿಯಾಗಿ ಗ್ರಾಮದಲ್ಲಿ ನೀರಿಲ್ಲದೆ ಉಂಟಾಗಿರುವ ತೊಂದರೆಗಳನ್ನು ತಿಳಿಸಿದ್ದಾರೆ. ಕಾಗವಾಡ ಮತ್ತು ಅಥಣಿ ಮತ ಕ್ಷೇತ್ರದ ಜನತೆಗೆ ಜೀವನಾಡಿಯಾಗಿರುವ ಕೃಷ್ಣಾ ನದಿ ಬತ್ತಿ ಹೋಗಿದ್ದರಿಂದ ಪೂರ್ವಭಾಗದ ಜನತೆ ಈವರೆಗೆ ಬರ ಎದುರಿಸುತ್ತ ಬಂದಿದ್ದಾರೆ. ಈಗ ನದಿ ತೀರದ ಜನರು ಇದೆ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ.
ಕಾಗವಾಡ ಕ್ಷೇತ್ರದ ನದಿ ತೀರದಲ್ಲಿರುವ ಉಗಾರ, ಕುಸನಾಳ, ಮೊಳವಾಡ, ಮೋಳೆ, ಐನಾಪೂರ ಸೇರಿದಂತೆ ಅನೇಕ ಗ್ರಾಮದ ಜನತೆ ನೀರಿಲ್ಲದ ಪರದಾಟುತ್ತಿದ್ದು, ತಾಲೂಕಾಧಿಕಾರಿಗಳು ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ. ಆದರೆ ಇದೇ ಭಾಗದಲ್ಲಿ ನೀರಿನ ವ್ಯವಸ್ಥೆ ಇಲ್ಲದೆ ಇದ್ದಿದ್ದರಿಂದ ನೆರೆಯ ಮಹಾರಾಷ್ಟ್ರದ ಏತ ನೀರಾವರಿ ಯೋಜನೆಗಳಿಂದ ನೀರು ಪೂರೈಸುತ್ತಿದ್ದಾರೆ. ಸ್ಥಿತಿ ಗಂಭೀರಗೊಳ್ಳುತ್ತಿದೆ ಎಂದು ಶಾಸಕರು ವಿವರಿಸಿದ್ದಾರೆ.
ಬರುವ ಮೂರು ದಿನಗಳಲ್ಲಿ ಮಹಾರಾಷ್ಟ್ರದ ಕೊಯ್ನಾ, ಕಾಳಮ್ಮವಾಡಿ ಹಾಗೂ ಕರ್ನಾಟಕದಿಂದ ಹಿಡಕಲ ಆಣೆಕಟ್ಟೆನಿಂದ ಕೃಷ್ಣೆಗೆ ನೀರು ಹರಿಸಿ ಜನರ ನೀರಿನ ದಾಹ ತೀರಿಸಲು ಮುಂದಾಗಿ ಎಂದು ಶಾಸಕರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.ಶಾಸಕರೊಂದಿಗೆ ಅಥಣಿಯ ಖ್ಯಾತ ನ್ಯಾಯವಾದಿ ಬಿ.ಎ.ಚವ್ಹಾಣ, ರೈತ ಮುಖಂಡ ದಾದಾ ಪಾಟೀಲ್, ಮಾಜಿ ಜಿಪಂ ಸದಸ್ಯ ಅಪ್ಪಾಸಾಹೇಬ ಅವತಾಡೆ, ಅಬ್ದುಲ್ ಮುಲ್ಲಾ, ಸೇರಿದಂತೆ ಅನೇಕರು ಸಾಥ್ ನೀಡಿದರು.