ಬೆಳಗಾವಿ: ಭೂತರಾಮನಹಟ್ಟಿ ಮೃಗಾಲಯದಲ್ಲಿ ಹುಲಿ, ಸಿಂಹ ಸೇರಿದಂತೆ ಅನೇಕ ಪ್ರಾಣಿ, ಪಕ್ಷಿಗಳಿವೆ. ಆಸಕ್ತರು ಪ್ರಾಣಿಗಳನ್ನು ದತ್ತು ಪಡೆಯಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮನವಿ ಮಾಡಿದ್ದಾರೆ.
ಸಮೀಪದ ಭೂತರಾಮನಹಟ್ಟಿ ಮೃಗಾಲಯಕ್ಕೆ ಭೇಟಿ ನೀಡಿ, ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಈಗಾಗಲೇ ಕೆಲವರು ಇಲ್ಲಿನ ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಮತ್ತೆ ಯಾರಾದರೂ ಆಸಕ್ತರು ಇದ್ದರೇ ಪ್ರಾಣಿಗಳನ್ನು ದತ್ತು ಪಡೆಯಲು ಮುಂದೆ ಬರಬೇಕು. ಪ್ರಾಣಿ, ಪಕ್ಷಿಗಳನ್ನು ಸಾರ್ವಜನಿಕರು ದತ್ತು ಪಡೆದರೇ ಅವುಗಳ ನಿರ್ವಹಣೆಗೆ ಅನುಕೂಲವಾಗುತ್ತದೆ. ಪರಿಸರ ಅತ್ಯಂತ ಮುಖ್ಯ. ಪರಿಸರ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.