ಬೆಳಗಾವಿ: ರಾತ್ರೋರಾತ್ರಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಗೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಶಾಕ್ ನೀಡಿದ್ದಾರೆ. ಶಿವಸೇನೆಯ ಸಂಸದ ಧೈರ್ಯಶೀಲ್ ಮಾನೆ ಅವರಿಗೆ ಕರ್ನಾಟಕದ ಗಡಿ ಪ್ರವೇಶಿಸಿ ಬೆಳಗಾವಿಗೆ ಬರದಂತೆ ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದಾರೆ. ಮಂಗಳವಾರ (ಇಂದು) ನಗರದಲ್ಲಿ ಎಂಇಎಸ್ ಕಾರ್ಯಕರ್ತರು ಹುತಾತ್ಮರ ದಿನ ಆಚರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಹಾರಾಷ್ಟ್ರದ ಗಡಿ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಧೈರ್ಯಶೀಲ್ ಮಾನೆ ಆಗಮಿಸಲಿದ್ದರು.
ಮಾನೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇ ಆದಲ್ಲಿ ಪರಿಸ್ಥಿತಿ ಹದಗೆಡಬಹುದು. ಪ್ರಚೋದನಾತ್ಮಕ ಭಾಷಣ ಮಾಡಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಇದೆ ಎಂದು ತಿಳಿಸಿ ಸಿಆರ್‌ಪಿಸಿ 1997ರ ಕಲಂ 144 (3) ಅನ್ವಯ ವಿಶೇಷ ಅಧಿಕಾರ ಬಳಸಿ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಉದ್ರೇಕಕಾರಿ ಹೇಳಿಕೆಗಳಿಂದ ಭಾಷಾ ಸಮಸ್ಯೆ ಉದ್ಭವವಾಗಬಹುದು. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.
ಡಿಸಿಯಿಂದ ಮತ್ತೊಮ್ಮೆ ಖಡಕ್ ನಿರ್ಧಾರ: ಮಹಾಮೇಳಾವ್‌ನಲ್ಲೂ ಪಾಲ್ಗೊಳ್ಳುವುದಾಗಿ ಹೇಳಿದ್ದ ಮಾನೆ ಅವರನ್ನು ನಿರ್ಬಂಧಿಸಿ ಡಿ.19ರಂದು ಕೂಡಾ ಜಿಲ್ಲಾಧಿಕಾರಿ ನಿರ್ಬಂಧ ಆದೇಶ ಹೊರಡಿಸಿದ್ದರು. ಇದೀಗ ಮತ್ತೊಮ್ಮೆ ಖಡಕ್ ನಿರ್ಧಾರ ತೆಗೆದುಕೊಳ್ಳುವ ಮೂಲಕ ಅಧಿಕಾರಿ ಗಮನ ಸೆಳೆದಿದ್ದಾರೆ. ಗಡಿ ವಿವಾದ ಹೋರಾಟದಲ್ಲಿ ಗಲಭೆ ಸೃಷ್ಟಿಸಿ ಗೋಲಿಬಾರ್‌ನಲ್ಲಿ ಮೃತಪಟ್ಟವರ ಸ್ಮರಣಾರ್ಥ ಶಿವಸೇನೆ ಠಾಕ್ರೆ ಬಣ ಬೆಳಗಾವಿಯ ಹುತಾತ್ಮ ಚೌಕ್‌ನಲ್ಲಿ ವಿಶೇಷ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದೆ.
ಬೆಳಗಾವಿಗೆ ಬರುವುದಾಗಿ ಪತ್ರ ಬರೆದಿದ್ದ ಮಾನೆ:ಡಿಸೆಂಬರ್ 19ರಂದು ನಡೆಯಲಿರುವ ಎಂಇಎಸ್ ಮಹಾಮೇಳಾವ್‌ಗೆ ಬರುತ್ತಿದ್ದೇನೆ. ನನಗೆ ಸೂಕ್ತ ಭದ್ರತೆ ನೀಡಿ ಎಂದು ಈ ಹಿಂದೆ ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ಮಾನೆ ಪತ್ರ ಬರೆದಿದ್ದರು. ಬೆಳಗಾವಿ ವಿಧಾನಮಂಡಲ ಅಧಿವೇಶನ ಆರಂಭದ ದಿನದಂದೇ ಎಂಇಎಸ್ ಮಹಾಮೇಳಾವ್‌ಗೆ ತಯಾರಿ ಮಾಡಿಕೊಂಡಿತ್ತು. ಈ ಕಾರ್ಯಕ್ರಮಕ್ಕೆ ಬರುವುದಾಗಿ ಪತ್ರ ಬರೆದಿದ್ದು, ತಮ್ಮ ಪ್ರವಾಸದ ಪಟ್ಟಿಯನ್ನೂ ಲಗತ್ತಿಸಿದ್ದರು.