ಬೆಳಗಾವಿ:ಸಾವರ್ಕರ್ ಅವರು ಹಿಂಡಲಗಾ ಜೈಲಿನಲ್ಲಿ ಇದ್ದರು. 1950ರಲ್ಲಿ ಸುಮಾರು 100 ದಿನದವರೆಗೆ ಜೈಲಿನಲ್ಲಿ ಇದ್ದರು. ಆ ಬಂಧಿಖಾನೆಗೆ ನಾನು ಭೇಟಿ ಕೊಟ್ಟು ಬಂದಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಹಿಂಡಲಗಾ ಜೈಲಿಗೆ ಗೃಹ ಸಚಿವರು ಭೇಟಿ: ಬೆಳಗಾವಿ ನಗರದ ಹಿಂಡಲಗಾ ಜೈಲಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ, ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಹಿಂಡಲಗಾ ಜೈಲಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಅಲ್ಲಿರುವ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಸುಮಾರು 800 ಕೈದಿಗಳು ಅಲ್ಲಿದ್ದಾರೆ, ಅದರಲ್ಲಿ 27 ಜನ ಮಹಿಳಾ ಕೈದಿಗಳು ಇದ್ದಾರೆ. ಜೈಲಿನಲ್ಲಿ ಇರುವ ತೊಂದರೆ, ಮೂಲಸೌಕರ್ಯಗಳ ಬಗ್ಗೆ ಪರಿಶೀಲನೆ ಮಾಡಲಾಗಿದೆ ಎಂದರು.
ವಿಚಾರಣಾಧೀನ ಕೈದಿಯಾಗಿದ್ದ ಸಾವರ್ಕರ್: ಹಿಂಡಲಗಾ ಜೈಲಿಗೂ ವೀರ ಸಾವರ್ಕರ್‌ಗೂ ನಂಟಿದೆ. ಕಾರಣ ಹಿಂಡಲಗಾ ಜೈಲಿನಲ್ಲಿ 100 ದಿನ ವಿಚಾರಣಾಧೀನ ಕೈದಿಯಾಗಿ ಸಾವರ್ಕರ್ ಸೆರೆವಾಸದಲ್ಲಿದ್ದರು. 1950ರ ಏಪ್ರಿಲ್ 4 ರಿಂದ ಜುಲೈ 13 ವರೆಗೆ ವಿಚಾರಣಾಧೀನ ಕೈದಿಯಾಗಿ ಸಾವರ್ಕರ್ ಇದ್ದರು ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಪಾಕಿಸ್ತಾನ ಪ್ರಧಾನಿ ಭೇಟಿ ವಿರೋಧಿಸಿದ್ದ ಸಾವರ್ಕರ್: ಅಂದು ಪಾಕಿಸ್ತಾನ ಪ್ರಧಾನಿ ಲಿಯಾಕತ್ ಅಲಿ ಖಾನ್ ಭಾರತ ಭೇಟಿಯನ್ನು ಸಾವರ್ಕರ್ ವಿರೋಧಿಸಿದ್ದರಂತೆ. ಹಾಗಾಗಿ ಸಾವರ್ಕರ್ ಅವರನ್ನು ಬಂಧಿಸಿ ಬೆಳಗಾವಿ ಜೈಲಿಗೆ ಪೊಲೀಸರು ಕಳುಹಿಸಿದ್ದರು. 100 ದಿನ ಜೈಲು ವಾಸದ ಬಳಿಕ ಮುಂಬೈ ಕೋರ್ಟ್ಗೆ ಹೆಬಿಯಸ್ ಕಾರ್ಪಸ್ ಅರ್ಜಿಯನ್ನು ಸಾವರ್ಕರ್ ಪುತ್ರ ಸಲ್ಲಿಸಿದ್ದರು. ಜುಲೈ 13, 1950ರಂದು ಅವರನ್ನು ಅಧಿಕಾರಿಗಳು ಬಿಡುಗಡೆಗೊಳಿಸಿದ್ದರು ಎಂದು ಗೃಹ ಸಚಿವರು ಹೇಳಿದರು. ಬಳಿಕ ಸಾವರ್ಕರ್‌ರನ್ನು ಅದ್ಧೂರಿಯಾಗಿ ನಾಯಕರು ಬರಮಾಡಿಕೊಂಡಿದ್ದರು ಎಂದರು.