ಬೆಳಗಾವಿ :ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಹಾಗೂ ಉಮೇಶ್ ಕತ್ತಿ ಅವರ ನಿರ್ಣಯಕ್ಕೆ ಬದ್ಧವಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾತನಾಡಿ, ಡಿಸಿಸಿ ಬ್ಯಾಂಕ್ ಚುನಾವಣೆ ಪಕ್ಷಾತೀತವಾಗಿ ನಡೆಯಲಿದೆ. ಡಿಸಿಸಿ ಬ್ಯಾಂಕ್ ಯಾವ ಪಕ್ಷಕ್ಕೂ ಸೀಮಿತವಲ್ಲ. ಅದು ಸಹಕಾರ ರಂಗದಲ್ಲಿರುವ ಬ್ಯಾಂಕ್. ಹೀಗಾಗಿ ಜಿಲ್ಲೆ, ತಾಲೂಕಿನಲ್ಲಿರುವ ರೈತರು, ಸಂಬಂಧಿಸಿದ ನಾಯಕರು ಹಾಗೂ ಬಾಲಚಂದ್ರ ಜಾರಕಿಹೊಳಿ ಮತ್ತು ಉಮೇಶ್ ಕತ್ತಿ ಅವರ ನಿರ್ಣಯವೇ ಅಂತಿಮ ಎಂದರು.
ಕಳೆದ ವರ್ಷದಲ್ಲಿ ಆಗಿರುವ ಬೆಳೆ ಹಾನಿ ಪರಿಹಾರ ಬಿಡುಗಡೆ ಕುರಿತು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ಕ್ರಮಕೈಗೊಳ್ಳಲಾಗುವುದು. ಜೊತೆಗೆ 2019 ರಲ್ಲಿ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೂ ಹಾಗೂ ಈ ವರ್ಷ ಆಗಿರುವ ಮಳೆ ಹಾನಿಯ ಕುರಿತು ಸಭೆಯಲ್ಲಿ ಚರ್ಚಿಸಿ ಪರಿಹಾರ ಒದಗಿಸುವ ಕೆಲಸ ಮಾಡಲಾಗುವುದು. ಮಳೆ ಹಾನಿಯ ಸಮೀಕ್ಷೆ ಮಾಡಲು ಈಗಾಗಲೇ ತಿಳಿಸಿದ್ದೇನೆ. ಬೆಳೆ ಹಾನಿ ಸರ್ವೆಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದರು.