ಬೆಳಗಾವಿ:ಸಿಎಂ ಬದಲಾವಣೆ ಇಲ್ಲ ಎಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಪದೇ ಪದೆ ಈ ಬಗ್ಗೆ ಕೇಳದೆ ಈ ವಿಚಾರ ಕ್ಲೋಸ್ ಮಾಡಿ ಬಿಡಿ ಎಂದು ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಸಂಕ್ರಾಂತಿ ಬಳಿಕ ಉತ್ತರಾಯಣ ಕಾಲದಲ್ಲಿ ಎಲ್ಲವೂ ಬದಲಾಗುತ್ತೆ ಎಂಬ ಯತ್ನಾಳ್ ಹೇಳಿಕೆಗೆ ನಗರದ ಪ್ರವಾಸಿ ಮಂದಿರದಲ್ಲಿ ಪ್ರತಿಕ್ರಿಯೆ ನೀಡಿದ ರಮೇಶ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವೈಯಕ್ತಿಕ ವಿಚಾರವಾಗಿದ್ದು, ಯತ್ನಾಳ್ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಸಿಎಂ ಬದಲಾವಣೆ ಇಲ್ಲ ಎಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಪದೇ ಪದೆ ಈ ಬಗ್ಗೆ ಕೇಳದೇ ಈ ವಿಚಾರ ಕ್ಲೋಸ್ ಮಾಡಿಬಿಡಿ. ಮುಂದಿನ ಎರಡೂವರೆ ವರ್ಷ ಸಿಎಂ ಆಗಿ ಬಿಎಸ್ವೈ ಮುಂದುವರೆಯುತ್ತಾರೆ ಈ ಬಗ್ಗೆ ನಾನು ಸ್ಪಷ್ಟವಾಗಿ ಹೇಳುತ್ತೇನೆ ಎಂದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬೆಂಬಲಿಗರಿಂದ ಕ್ಯಾಲೆಂಡರ್ಗಳ ವಿತರಣೆ ವಿಚಾರಕ್ಕೆ, ಕ್ಯಾಲೆಂಡರ್ ವಿತರಣೆ ಮಾಡೋದು ಏನು ಮಹಾ ಅಪರಾಧಾನಾ..? ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಬಿಜೆಪಿ ಪಡೆಯಬೇಕೆಂದು ಸಂಕಲ್ಪ ಮಾಡಿಕೊಂಡಿದ್ದೇವೆ. ಆ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಗೆಲ್ಲುವುದು, ಬಿಡುವುದು ಮುಂದಿನ ವಿಚಾರ. ಅದನ್ನು ಮತದಾರರು ನಿರ್ಣಯ ಮಾಡ್ತಾರೆ ಎಂದರು.
ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಮಾತನಾಡಬೇಡ ಅಂತಾ ವಾರ್ನಿಂಗ್ ಇದೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ, ಗ್ರಾಮೀಣ ಶಾಸಕಿ ಬಗ್ಗೆ ಮಾತನಾಡಬೇಡ ಅಂತಾ ವರಿಷ್ಠರು ಹೇಳಿದ್ದಾರೆ ಅಂತಾ ನಾನು ಹೇಳಿಲ್ಲ. ನನ್ನ ಹಿತೈಷಿಗಳು ಹೇಳಿದ್ದಾರೆ ಅಂತಾ ಹೇಳಿದ್ದೇನೆ. ನಮ್ಮ ವರಿಷ್ಠರು ಶಾಸಕಿಗೆ ಏನು ಸಂಬಂಧ? ವರಿಷ್ಠರು ಏಕೆ ಹೇಳ್ತಾರೆ?. ನನ್ನ ಹಿತೈಷಿಗಳು ಆಕೆ ಬಗ್ಗೆ ಮಾತನಾಡಬೇಡ ಅಂತಾ ಸಲಹೆ ಕೊಟ್ಟಿದ್ದಾರೆ. ಹೀಗಾಗಿ ಹಿತೈಷಿಗಳು ಸಲಹೆ ಕೊಟ್ಟಿದ್ದಕ್ಕೆ ಆಕೆ ಬಗ್ಗೆ ಮಾತನಾಡೋದನ್ನ ಬಿಟ್ಟಿದ್ದೇನೆ. ವರಿಷ್ಠರು ಹೇಳೋಕೆ ಆಕೆ ಏನು ಅಂತಹ ದೊಡ್ಡ ಲೀಡರ್ ಹಾ?... ಎಂದು ಪರೋಕ್ಷವಾಗಿ ಏಕವಚನದಲ್ಲೇ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.