ಬೆಳಗಾವಿ:ಮೈತ್ರಿ ಸರ್ಕಾರ ಉರುಳಿಸಿರುವ ರಮೇಶ್ ಜಾರಕಿಹೊಳಿ ರಾಜಕೀಯವಾಗಿ ನನಗಿಂತ ಎತ್ತರ ಸ್ಥಾನಕ್ಕೆ ಹೋಗಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಅವರು ಡಿಸಿಎಂ ಜತೆಗೆ ಜಲಸಂಪನ್ಮೂಲ ಸಚಿವರಾಗುತ್ತಾರೆ. ಈ ಬಗ್ಗೆ ನನಗೆ ಶೇ. 99 ರಷ್ಟು ವಿಶ್ವಾಸ ಇದೆ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ.
ರಮೇಶ್ ರಾಜಕೀಯವಾಗಿ ನನಗಿಂತ ಎತ್ತರದ ಸ್ಥಾನದಲ್ಲಿದ್ದಾರೆ: ಸತೀಶ್ ಜಾರಕಿಹೊಳಿ ವ್ಯಂಗ್ಯ
ರಮೇಶ್ ಜಾರಕಿಹೊಳಿ ರಾಜಕೀಯವಾಗಿ ನನಗಿಂತ ಎತ್ತರ ಸ್ಥಾನಕ್ಕೆ ಹೋಗಿದ್ದಾರೆ ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಕಾರಾತ್ಮಕ ವಿಷಯಗಳಿಗೆ ಜಾಸ್ತಿ ಪ್ರಾಮುಖ್ಯತೆ ಸಿಗುತ್ತಿದೆ. ಹೀಗಾಗಿ ರಮೇಶ್ ಮೈತ್ರಿ ಸರ್ಕಾರ ಉರುಳಿಸಿದ್ದು, ದೊಡ್ಡ ವಿಷಯವೇ. ಆ ಮೂಲಕ ನನಗಿಂತ ರಾಜಕೀಯವಾಗಿ ಎತ್ತರಕ್ಕೆ ಹೋಗಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ರಮೇಶ ಡಿಸಿಎಂ, ಜಲಸಂಪನ್ಮೂಲ ಜತೆಗೆ ಜಿಲ್ಲಾ ಉಸ್ತುವಾರಿಯೂ ಆಗಲಿದ್ದಾರೆ ಎಂದ್ರು. ರಮೇಶ್ ಜಾರಕಿಹೊಳಿ ಆರ್ಥಿಕವಾಗಿ ಖಾಲಿಯಾಗಿದ್ದಾನೆ. ನಾನು ಸಾಲಗಾರ ಎಂದು ಅವರೇ ಒಪ್ಪಿಕೊಂಡಿದ್ದಾರೆ. ರಮೇಶ್ ಹಣವನ್ನೆಲ್ಲ ಅವರ ಅಳಿಯ ಅಂಬಿರಾವ್ ಪಾಟೀಲ್ ತೆಗೆದುಕೊಂಡು ಹೋಗಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.
ಅಕ್ರಮ ಆಸ್ತಿ ಸಂಬಂಧ ನಮ್ಮವರು ಇಡಿ ತನಿಖೆ ಎದುರಿಸುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಪ್ಪೆಸಗಿದ್ರೆ ಶಿಕ್ಷೆ ಆಗಲಿ. ನಿರಪರಾಧಿಗಳಿಗೆ ಶಿಕ್ಷೆ ಆಗುವುದು ಬೇಡ ಎಂಬುವುದು ನಮ್ಮ ವಾದ. ದೇಶದಲ್ಲಿ 130 ಕೋಟಿ ಜನರಿದ್ದಾರೆ. ಅವರೆಲ್ಲರನ್ನೂ ಕಟ್ಟಿ ಹಾಕಲು ಆಗುವುದಿಲ್ಲ ಎಂದು ಇಡಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಗೋಕಾಕ್ ಉಪಚುನಾವಣೆಯಲ್ಲಿ ನಾನು ಹೇಳಿದವರಿಗೆ ನಮ್ಮ ಹೈಕಮಾಂಡ್ ಟಿಕೆಟ್ ನೀಡಲಿದೆ. ಬಿಜೆಪಿ ಮುಖಂಡ ಅಶೋಕ ಪೂಜಾರಿ ಕಾಂಗ್ರೆಸ್ಗೆ ಬಂದ್ರೆ ಸ್ವಾಗತ. ಕಾಂಗ್ರೆಸ್ ಪಕ್ಷದ ಸಿದ್ಧಾಂತದಂತೆ ನಂಬಿ ಬಂದವರನ್ನು ಸೇರಿಸಿಕೊಳ್ಳಲಾಗುವುದು ಎಂದ್ರು.