ಬೆಳಗಾವಿ: ನಿನ್ನೆ ಮಧ್ಯರಾತ್ರಿವರೆಗೂ ಸಿಡಿ ಬಿಡ್ತಿನಿ, ಸಿಡಿ ಬಿಡ್ತಿನಿ ಎಂದು ಡಿ.ಕೆ.ಶಿವಕುಮಾರ್ ನನ್ನನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ. ಗೋಕಾಕ್ ಪಟ್ಟಣದಲ್ಲಿ ಇಂದು ಮತ ಚಲಾಯಿಸಿದ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಚುನಾವಣೆ ಘೋಷಣೆ ಆದಾಗಿನಿಂದ ಡಿಕೆ ಶಿವಕುಮಾರ್ ಬ್ಲ್ಯಾಕ್ಮೇಲ್ ಮಾಡುತ್ತಲೇ ಇದ್ದಾರೆ. ಕೇಂದ್ರ ಗೃಹಸಚಿವರು ಹಾಗೂ ಮುಂಬರುವ ರಾಜ್ಯದ ಮುಖ್ಯಮಂತ್ರಿ ಸಿಡಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ಡಿಕೆಶಿ ಸಿಡಿ ಮಾಡಿ ನೂರಾರು ಜನರ ಬಾಳು ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹಸ್ತಕ್ಷೇಪ ಬಿಡಬೇಕು. ಇಲ್ಲದಿದ್ದರೆ ಸಿಡಿ ಬಿಡುವುದಾಗಿ ಬೆದರಿಕೆ ಹಾಕಿದ್ದರು. ನಾನು ಯಾರ ಬೆದರಿಕೆಗೂ ಹೆದರುವವನಲ್ಲ. ನನ್ನ ಬೆನ್ನಿಗೆ ನನ್ನ ಕುಟುಂಬ ಹಾಗೂ ಕ್ಷೇತ್ರದ ಜನರಿದ್ದಾರೆ. ಇವರ ಬೆದರಿಕೆಗಳಿಗೆ ಹೆದರುವ ಮಾತೇ ಇಲ್ಲ. ಈ ಮೊದಲು ಡಿಕೆಶಿ ಈಗಿನಂತಿರಲಿಲ್ಲ. ವಿಷಕನ್ಯೆಯ ಸಹವಾಸ ಡಿಕೆಶಿಯನ್ನು ಬದಲು ಮಾಡಿದೆ. ಈ ಪ್ರಕರಣ ಸಿಬಿಐಗೆ ಒಪ್ಪಿಸಿದರೆ ನೂರಾರು ಜನರು ನೆಮ್ಮದಿಯ ಜೀವನ ಮಾಡುತ್ತಾರೆ ಎಂದು ರಮೇಶ ಜಾರಕಿಹೊಳಿ ಹೇಳಿದರು.