ಬೆಳಗಾವಿ :ನೀವೇನಾದರೂ ಹೇಳ್ರೀ.. ನಾವಂತೂ ಈಗ ಬೆಳಗಾವಿಯಾಗ ಒಂಚೂರು ನಿಟ್ಟುಸಿರು ಬಿಟ್ಟೇವಿ ನೋಡ್ರೀಪಾ.. ಅದಕ್ಕೆ ಒಂದ್ ಕಾರಣವೂ ಐತ್ರೀಪಾ ಮತ್ತಾ.. ನಮ್ ಈ ಕುಂದಾನಗರಿಯಾಗ್ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅದಾರಲ್ರೀ ಅವ್ರನ್ನಾ ನಾವ್ ಎಷ್ಟು ವರ್ಣನೆ ಮಾಡಿದರೂ ಕಡಿಮೆ ಆಗುತ್ತ್ ನೋಡ್ರೀ.. ಅದೆಂಗ್ರೀ ಅಂತಾ ಕೇಳ್ತೀರಲ್ಲಾ.. ಅದಕ್ಕಾಗೇ ಮರಗಳ ಮರುಹುಟ್ಟಿನ ಬಗ್ಗೆ ಕಥಿ ಮಾಡಿ ಹೇಳ್ತೇವಿ ಕೇಳ್ರೀಪಾ..
ಬೇಸಿಗೆ ಬಂದ್ರಾ ಏನ್ ಸೆಕೆ ಐತಿ ಅಲ್ಲಾ ಅಂತೀರಿ, ಬಿಸಿಲಾಗ್ ನಿಂತ್ಕೊಂಡ್ ನಿಮ್ಗೇ ಉಸಿರು ಕೊಡ್ತೇವಿ, ನಿಮ್ ನೆತ್ತಿ ತಂಪಾಗಿಡ್ತೇವಿ, ಪ್ರಕೃತಿ ಹಸಿರಾಗಿಡ್ತೇವಿ. ಆದರೂ ನಮ್ ಬುಡಕ್ಕೇ ಕೊಡ್ಲಿ ಹಾಕೋದ್ ಮಾತ್ರ ನೀವ್ ಮನುಷ್ಯಾರ್ ಬಿಡೋದಿಲ್ಲಾ, ಇರೋಬರೋ ಕಾಡ್ ಕಡೆದ್ರಾ ತಾಪಮಾನ ಹೆಚ್ಚಾಗ್ದೇ ಇನ್ನೇನಾಗ್‌ತೈತ್ರೀ.. ಕುಂದಾನಗರಿ ಬೆಳಗಾವಿನೂ ಈಗೀಗ್ ಭಾಳ್ ಬೆಳ್ಯಾಕಂತೇತ್ರೀ. ಒಂದ್ ಕಡೆಗೆ ಬಿಲ್ಡೀಂಗ್‌ಗಳೇ ತಲೆ ಎತ್ತಾಕಂತಾವ್, ಮತ್ತೊಂದ್ ಕಡೆಗೆ ರಸ್ತೆನೂ ಅಗಲಾಗ್ತಾ ಹೊಂಟಾವೂ.ಸಿಟಿಯಾಗ್ ರಸ್ತೆ ಅಗಲ್ ಮಾಡ್ತಾಯಿದ್ದಾರಲ್ರೀ, ಇನ್ನೇನ್ ನಮ್ ಗತಿ ಮುಗೀತ್ ಬಿಡು ಅಂತಾ ನಾವೆಲ್ಲ ಮರಳಗಳು ಮಾತಾಡಿಕೊಂಡಿದ್ವಿ. ಆದ್ರೇ, ಪಿಡಬ್ಲ್ಯೂಡಿ ಸಾಹೇಬ್ರುಗಳದರಲ್ರೀ ಅವರು ಭಾಳ್ ದೊಡ್ಡ ಮನಸ್ ಮಾಡಿ ನಮ್ಗೂ ಪುನರ್ಜನ್ಮಾ ಕೊಟ್ಟಾರೀ.. ಇಲ್ಲಾಂದ್ರೇ 60ಕ್ಕೂ ಹೆಚ್ಚು ಮರಗಳ ಮಾರಣಹೋಮ ಆಗ್ತಾಯಿತ್ರೀ..
ನಗರದ ಅನೇಕ ರಸ್ತೆಗಳು ಹಿರಿದಾಗುತ್ತಿವೆ ಅಲ್ವೇನ್ರೀ.. ಅಂದರಿಂದ ಸಿಟಿಯ ಅಂದವೂ ಹೆಚ್ಚುತ್ತೆ ಬಿಡ್ರೀ. ಆದ್ರೇ, ಅಗಲೀಕರಣ ಅಂತಾ ಹೇಳಿ ನಮ್ಮನ್ನು ಕೊಡ್ಲಿಯಿಂದ ಕಡೆದೆಬಿಡ್ತಿದ್ರೀ.. ಈಗ ಮಾತ್ರ ಹಂಗೇನಾಗಿಲ್ಲಾ ನೋಡ್ರಿ ಮತ್ತಾ,ಬೆಳೆದು ನಿಂತ ನಮ್ಮೆಲ್ಲ ಸ್ನೇಹಿತ ಮರಗಳನ್ನೂ ನೆಲಕ್ಕೆ ಉರುಳಿಸುವ ಬದಲು ಮರುಜೀವ ಕೊಡುವ ಕೆಲಸ ನಡೀತಿದೆ ಅನ್ನೋದೇ ನಮ್ಗಾ ಭಾಳ್ ಖುಷಿ ತಂದೇತ್ರೀ.
ನಗರದ ಬಾಕ್ಸೈಟ್-ಟಿಬಿ ಸೆಂಟರ್ನ 1.5 ಕಿಮೀ ರಸ್ತೆ ಅಗಲೀಕರಣ ನಡಿಯಾಕಂತೇತ್ರೀ.. ಅದಕ್ಕಾಗಿ 60 ಕ್ಕೂ ಅಧಿಕ ಮರಗಳನ್ನು ನೆಲಸಮ ಮಾಡಬೇಕಾದ ಅನಿವಾರ್ಯತೆ ಇತ್ತುರೀ. ಆದ್ರೇ, ಪಿಡಬ್ಲ್ಯೂಡಿಯವರು ಒಂಚೂರು ಶಾಣ್ಯಾತನ ತೋರಿಸ್ಯಾರ್ರೀ.. ನಮ್ ಎಲ್ಲ ಸ್ನೇಹಿತರು, ಬಂಧು-ಬಾಂಧವ ಮರಗಳನ್ನೆಲ್ಲ ಬೇರೆಡೆಗೆ ಸ್ಥಳಾಂತರ ಮಾಡ್ತಿದ್ದಾರೀ, ನಗರದ ಪಿರನವಾಡಿಯ ಹೊಸ ಕೆರೆಯ ಬಳಿ ಒಂದೊಂದಾ ಮರ ನೆಡ್ತಿದ್ದಾರಿ ನಮ್ ಪಿಡಬ್ಲ್ಯೂಡಿ ಸಾಹೇಬ್ರುಗಳು.
ಮರಗಳನ್ನ ಶಿಫ್ಟ್ ಹೆಂಗ್ ಮಾಡ್ತಾರಂತಾ ಇಲ್ನೋಡ್ರೀ..
ಅಲ್ರೀ ನಮ್ಗೂ (ಮರಗಳಿಗೆ) ಜೀವ ಐತಿ ಅಂತಾ ನೀವೂ ಮನುಷ್ಯಾರು ಎಲ್ಲಾರೂ ನಂಬ್ತೀರಿಲ್ಲೋ.. ಮರ ಸ್ಥಳಾಂತರ ಮಾಡೋದ್ ಅಷ್ಟೊಂದ್ ಸಲೀಸಾಗಿ ಮಾಡೋಕಾಗಲ್ರೀ.. ಇದಕ್ಕೆ ಪರಿಶ್ರಮ ಜಾಸ್ತಿನಾ ಹಾಕಬೇಕಾಗುತ್ತೆ. ಮೊದಲು ನಮ್ಮಗಳ (ಮರಗಳ) ಎಲ್ಲಾ ಕೊಂಬೆಗಳನ್ನೂ ಕಟ್ ಮಾಡ್ಬೇಗುತ್ರೀ.. ಹಂಗಾ ಕಟಾವ್ ಮಾಡಿದ ಕೊಂಬೆಗಳು ಜೀವ ಕಳೆದುಕೊಳ್ಳದಂತೆ ದ್ರವರೂಪದ ಔಷಧಿ ಲೇಪಿಸ್ತಾರೀ ಮತ್ತಾ.. ನಮ್( ಮರಗಳ) ಸುತ್ತ 2 ಮೀಟರ್ ಅಳತೆ ಬಿಟ್ಟು ಸುಮಾರು 6 ಅಡಿ ಆಳ ಅಗೆದು ಬೇರನ್ನು ಬೇರ್ಪಡಿಸಲಾಗುತ್ರೀ.. ನಂತರ ಇದನ್ನು ಕ್ರೇನ್ ಮೂಲಕ ಬೇರೆಡೆ ಮರು ನಾಟಿ ಮಾಡಲಾಗುತ್ತೆ ನೋಡ್ರೀ..
ಹಂಗಂತಾ ಇಷ್ಟು ಸುಮ್ನಾದ್ರ್ ನಾವ್ ಬದುಕೋದಾದ್ರೂ ಹೆಂಗ್ರೀ.. ಇದೊಂಥರಾ ಆಪರೇಷನ್ ಆದ್ಮೇಲೆ ಪೇಶೆಂಟ್ನಾ ಧೇಕ್‌ರೇಖಿ ಮಾಡ್ದಂಗ್ ನೋಡ್ರೀ, ನಮ್ಗಗಳನ್ನು ಬೇರೆಡೆಗೆ ಶಿಫ್ಟ್ ಮಾಡಿದ್‌ಮ್ಯಾಲೆ ಕೆಲ ದಿನಗಳ ಕಾಲ ಆರೈಕೆನೂ ಮಾಡ್ಬೇಕಾಗುತ್ರ್ಯಾ ಮತ್ತಾ.. ಅಂದಾಗ ಮಾತ್ರ ನಮ್ಗೇ ಮರಜೀವ ಬಂದಂಗಾಗುತ್ರೀ.. ಆಗ ನಾವೂ ಮತ್ತೆ ಚಿಗುತುಕೊಳ್ತೇವ್ರೀ.. ಹಸಿರಿನಿಂದ ಕಂಗೊಳಿಸ್ತಾ ಮನುಷ್ಯಾರ್ ಉಸಿರು ಹೆಚ್ಚಿಸ್ತೇವ್ರೀ.. ಮೊದಲಿನಂಗಾ ನಳ ನಳಿಸ್ತೇವ್ರೀ..
ನಮ್ ಬೆಳಗಾವಿ ಜಿಲ್ಲೆಯಾಗ್ ಈವರೆಗೂ ಅದೆಷ್ಟೋ ರಸ್ತೆಗಳ ಅಗಲೀಕರಣ ಮಾಡ್ಯಾರ್ರೀ.. ಆದ್ರೇ, ಈ ರೀತಿ ಮರಗಳಿಗೆ ಮರು ಜೀವಕೊಡುವ ಕೆಲಸ ಇನ್ನೂಮಟಾ ಯಾರೂ ಮಾಡಿದಿಲ್ರೀ.. ಲೋಕೋಪಯೋಗಿ ಇಲಾಖೆಯ ಸಾಹೇಬ್ರುಗಳದರಲ್ರೀ ಅವರಿಗೆ ನಾವ್ ಎಷ್ಟು ಕೋಟಿ ಶರಣು ಹೇಳಿದರೂ ಕಡಿಮಿನಾ ಆಗತೈತ್ರೀ.. ರಸ್ತೇಯನ್ನಾ ಚೆಂದಾಗಿ ಒಳ್ಳೇ ಅಗಲ್ ಮಾಡ್ಯಾರ್‌ರೀಪಾ.. ಯಾಕ್ ಸುಮ್ನೇ ಹೇಳ್ಬೇಕು. ಹಂಗಾ, 60 ಕ್ಕೂ ಹೆಚ್ಚು ಮರಗಳನ್ನ ಮರುಜೀವ ಕೊಟ್ಟು ಅಧಿಕಾರಿಗಳು, ಸಿಬ್ಬಂದಿ ಹಂಗಾ ಒಂದಿಷ್ಟು ಯಂತ್ರಗಳಾದವಲ್ಲ ಇವರೆಲ್ಲಾರೂ ಸೇರಿ ದೊಡ್ಡ ಪುಣ್ಯಾ ಕಟ್ಕೊಂಡಾರೀ.. ಇಷ್ಟೈತೀ ನೋಡ್ರೀ ನಮ್ ಮರಗಳ ಕಥಿ, ಏನ್ರೀಪಾ.. ಇದೇನ್ ಮಾಡೀರಲ್ಲ, ಇದನ್ನ ನಾವಂತೂ ಮರಿಯೋದಿಲ್ರೀ, ಇನ್ನೊಂದಿಷ್ಟು ಗಾಳಿ ಹೆಚ್ಚಿಸ್ತೇವ್ರೀ, ವಾತಾವರಣ ತಂಪಾಗಿ ಇಡ್ತೇವ್ರೀ, ಹಂಗಾ ಎಲ್ರೂ ಪರಿಸರ ಉಳಿಸಾಕ್ ಇನ್ನೊಂದಿಷ್ಟು ಶಕ್ತಿ ಹಾಕ್ತೇವ್ರೀ.. ಇನ್ಮೇಲೆ ಕಾಡು ಕಡಿಬ್ಯಾಡ್ರೀ, ನಮನ್ನ ನೀವು ಉಳಿಸಿದ್ರೇ ನಿಮ್ಮನ್ನ ನಾವೂ ಬದುಕಿಸ್ತೀವ್ರೀ.. ನೀವೂ ಬದುಕ್ರೀ ನಮ್ಮನ್ನೂ ಬದುಕಾಕ್ ಬಿಡ್ರೀ.. ಬರೋನ್ರೀ ಯಪ್ಪಾ, ನಿಮ್ಗೆಲ್ಲಾ ಒಳ್ಳೇದಾಗ್ಲಿ..