ಬೆಳಗಾವಿ :ಚಿತ್ರದುರ್ಗದಲ್ಲಿ ನಡೆಯಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬೃಹತ್ ಸಮಾವೇಶ ಕುರಿತ ಕಾಂಗ್ರೆಸ್ ನಾಯಕರ ಪೂರ್ವ ಸಿದ್ಧತಾ ಸಭೆ ಡಿಸೆಂಬರ್ 22ರಂದು ಬೆಳಗಾವಿಯಲ್ಲಿ ನಡೆಯಲಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಬೃಹತ್ ಸಮಾವೇಶವನ್ನು ಚಿತ್ರದುರ್ಗದಲ್ಲಿ ಜನವರಿ 8ರಂದು ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ. ಇಲ್ಲಿನ ಸರ್ಕಾರಿ ವಿಜ್ಞಾನ ಕಾಲೇಜಿನ ಮೈದಾನದಲ್ಲಿ ನಡೆಯಲಿರುವ ಕಾಂಗ್ರೆಸ್ ಪಕ್ಷದ ಸಮಾವೇಶವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ತೀರ್ಮಾನಗಳ ಕುರಿತು ಚರ್ಚಿಸಲು ಈ ಸಭೆ ಕರೆಯಲಾಗಿದೆ.
ಗುರುವಾರ ಸಂಜೆ 6.30ಕ್ಕೆ ಬೆಳಗಾವಿಯ ಕೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ “ಫೇರ್‌ಫೀಲ್ಡ್ ಮ್ಯಾರಿಯಟ್ ಹೋಟೆಲ್"ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಇದರಲ್ಲಿ ಮಾಜಿ ಕೇಂದ್ರ ಸಚಿವರು ಹಾಗೂ ಎ.ಐ.ಸಿ.ಸಿ.ಯ ಸಿ.ಡಬ್ಲ್ಯೂಸಿ, ಖಾಯಂ ಅಹ್ವಾನಿತರಾದ ಕೆ.ಹೆಚ್. ಮುನಿಯಪ್ಪ, ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಾಗೂ ಇನ್ನಿತರ ಫರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಾಯಕರು ಪಾಲ್ಗೊಳ್ಳಲಿದ್ದಾರೆ.