ಕರ್ನಾಟಕ

karnataka

ETV Bharat / state

ಬಿಜೆಪಿ ಸರ್ಕಾರ ಜನರಿಗೆ ಮಕ್ಮಲ್​ ಟೋಪಿ ಹಾಕಿದೆ.. ಪ್ರಜಾಧ್ವನಿ ಮೂಲಕ ಕಾಂಗ್ರೆಸ್​ ನಾಯಕರ ವಾಗ್ದಾಳಿ - Basavaraja Bommai

ಕಾಂಗ್ರೆಸ್​ನಿಂದ ಪ್ರಜಾಧ್ವನಿ ಬಸ್​ ಯಾತ್ರೆ- ಬಿಜೆಪಿ ವಿರುದ್ಧ ವಾಗ್ದಾಳಿ - ಜನರಿಗೆ ಅಚ್ಛೇ ದಿನ ಬರಲೇ ಇಲ್ಲವೆಂದ ಕಾಂಗ್ರೆಸ್​ ನಾಯಕರು

ಕಾಂಗ್ರೆಸ್ ಪಕ್ಷದಿಂದ ಪ್ರಜಾಧ್ವನಿ ಸಮಾವೇಶ
ಕಾಂಗ್ರೆಸ್ ಪಕ್ಷದಿಂದ ಪ್ರಜಾಧ್ವನಿ ಸಮಾವೇಶ

By

Published : Jan 11, 2023, 8:00 PM IST

ಚಿಕ್ಕೋಡಿ:ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವುದರಿಂದ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಕಾಂಗ್ರೆಸ್ ಪಕ್ಷ ಆಡಳಿತರೂಢ ಸರ್ಕಾರದ ವೈಫಲ್ಯಗಳನ್ನು ಇಟ್ಟುಕೊಂಡು ಪ್ರಜಾಧ್ವನಿ ಬಸ್​ ಯಾತ್ರೆಯನ್ನು ರಾಜ್ಯಾದ್ಯಂತ ಇವತ್ತಿನಿಂದ ಚಿಕ್ಕೋಡಿಯಿಂದ ಪ್ರಾರಂಭ ಮಾಡಿದೆ. ಚಿಕ್ಕೋಡಿ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ನಾಯಕರನ್ನು ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡರು. ನಂತರ ಗಿಡಕ್ಕೆ ನೀರು ಹಾಕುವ ಮೂಲಕ ಪ್ರಜಾಧ್ವನಿ ಸಮಾವೇಶಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಬೇರೆ ಬೇರೆ ಪಕ್ಷದ ಶಾಸಕರನ್ನು ಖರೀದಿ ಮಾಡಿ ಬಿಜೆಪಿ ಸರ್ಕಾರ ರಚನೆ ಮಾಡಿದ್ರು. ಈ ಸರ್ಕಾರಕ್ಕೆ ಯಾವುದೇ ನೈತಿಕತೆ ಇಲ್ಲ. ಬಿಜೆಪಿ ಸರ್ಕಾರ 600 ಭರವಸೆಗಳನ್ನು ಕೊಟ್ಟಿದ್ರು. 10% ಅಂದ್ರೆ 60 ಭರವಸೆಗಳನ್ನು ಸಹ ಈಡೇರಿಸಲು ಬಿಜೆಪಿಯಿಂದ ಆಗಿಲ್ಲ. ಇನ್ನು ಸಹ 540 ಭರವಸೆಗಳು ಹಾಗೆಯೇ ಉಳಿದಿವೆ ಎಂದು ಹೇಳಿದರು. ನಾವು ಅಧಿಕಾರಕ್ಕೆ ಬಂದ್ರೆ ಸೊಸೈಟಿ ಸಾಲ, ಪ್ರಾಥಮಿಕ ಪತ್ತಿನ ಒಂದು ಲಕ್ಷದವರೆಗಿನ ಸಾಲ ಮನ್ನಾ ಮಾಡ್ತಿವಿ ಎಂದು ಹೇಳಿದ್ದಿವಿ ಎಂದರು.

ಒಂದೇ ಒಂದು ರೂಪಾಯಿ ಮನ್ನಾ ಮಾಡಲು ನರೇಂದ್ರ ಮೋದಿಯಿಂದ, ಬಸವರಾಜ ಬೊಮ್ಮಾಯಿಯಿಂದ ಸಾಧ್ಯವಾಗಿಲ್ಲ. ರೈತರ ಸಾಲ ಮನ್ನಾ ಮಾಡಲು ಆಗಿಲ್ಲ. 222700 ರೈತರ ಕುಟುಂಬಗಳಿಗೆ 8160 ಕೋಟಿ ರೂಗಳ ಸಾಲವನ್ನು ಮನ್ನಾ ಮಾಡಿದ್ದು ಕಾಂಗ್ರೆಸ್ ಸರ್ಕಾರ ಎಂದು ಹೇಳಿದರು.

ಬಿಜೆಪಿ ವಿರುದ್ಧ ವಾಗ್ದಾಳಿ..ನರೇಂದ್ರ ಮೋದಿ ಹೇಳಿದ್ರು ರೈತರ ಆದಾಯವನ್ನು ದುಪ್ಪಟ್ಟು ಮಾಡ್ತೇವೆ ಎಂದು. 2012-13 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ರೈತನ ಆದಾಯ 48000ರೂ ಇತ್ತು. ನಾವು ಅಧಿಕಾರ ಬಿಡುವಾಗ 113000 ರೂ ಇತ್ತು. ರೈತರ ಆದಾಯವನ್ನು ದುಪ್ಪಟ್ಟು ಮಾಡಿದ್ದು ನಾವು. ಬೆಳಗಾವಿ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದಾರೆ. ಇಲ್ಲಿ ನೀರಾವರಿ ಪ್ರದೇಶ ಜಾಸ್ತಿ ಇದೆ. ಕಬ್ಬಿಗೆ ಬೆಂಬಲ ಬೆಲೆ ನೀಡಿ ಅಂದ್ರೆ ಅದು ಸಾಧ್ಯವಾಗಿಲ್ಲ. ಕಬ್ಬಿಗೆ ಬೆಲೆ ಕೊಡಲು ಸಾದ್ಯವಿಲ್ಲ ಅಂದ್ರೆ ರೈತರ ಆದಾಯವನ್ನು ದುಪ್ಪಟ್ಟು ಮಾಡಲಿ. ಸಾಧ್ಯವಾಗುತ್ತಾ..? ಬಿಜೆಪಿ ಅಂದ್ರೆ ಸುಳ್ಳಿನ ಫ್ಯಾಕ್ಟರಿ. ರೈತರಿಗೆ ಮೋಸ, ಮಹಿಳೆಯರಿಗೆ ಮೋಸ, ಹಿಂದುಳಿದ ವರ್ಗದವರಿಗೆ ಮೋಸ, ಯುವಕರಿಗೆ ಮೋಸ ಮಾಡುತ್ತಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಸರ್ಕಾರ‌ ಮಕ್ಮಲ್ ಟೋಪಿ ಹಾಕಿದೆ.. ರಾಷ್ಟ್ರದ ಯುವಜನೋತ್ಸವದಲ್ಲಿ ಭಾಗಿಯಾಗಲು ಪಿಎಂ ನರೇಂದ್ರ ಮೋದಿ ಹುಬ್ಬಳ್ಳಿಗೆ ಬರ್ತಿದ್ದಾರೆ. ಇದು ಯುವಕರ ಮಾರಕೋತ್ಸವ ಎನ್ನಬಹುದು. ಮೋದಿ ಮೋದಿ ಎಂದು ಅಧಿಕಾರಕ್ಕೆ ತಂದವರನ್ನು ಬಿಜೆಪಿ ಸರ್ಕಾರ‌ ಮಕ್ಮಲ್ ಟೋಪಿ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನರೇಂದ್ರ ಮೋದಿ ಹೇಳಿದ್ರು ಅಚ್ಛೇ ದಿನ ಆಯೆಂಗೆ ಎನ್ನುತ್ತಿದ್ದರು ಯಾರಿಗಾದರು ಅಚ್ಛೇ ದಿನ ಬಂತಾ..? ಪೆಟ್ರೋಲ್, ಅಡುಗೆ ಅನಿಲ ಸೇರಿದಂತೆ ಅನೇಕ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದಕ್ಕೆ ಅಚ್ಛೇ ದಿನ ಎಂದು ಹೇಳಬಹುದೇ..? ಕರ್ನಾಟಕ ಕಂಡ ವಿಕೇಸ್ಟ್ ಸಿಎಂ ಅಂದ್ರೆ ಅದು ಬಸವರಾಜ ಬೊಮ್ಮಾಯಿ. ದೆಹಲಿ ನಾಯಕರು ಕುಳಿತುಕೊ ಅಂದ್ರೆ ಕುಳಿತುಕೊಳ್ಳಬೇಕು, ನಿಂತ್ಕೋ ಅಂದ್ರೆ ನಿಂತ್ಕೋಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕಿಚಾಯಿಸಿದರು.

40% ಕಮಿಷನ್ ಸರ್ಕಾರ.. ಗುತ್ತಿಗೆದಾರ ಸಂತೋಷ ಆತ್ಮಹತ್ಯೆಯಲ್ಲಿ ಈಶ್ವರಪ್ಪನೇ ಪ್ರಮುಖ ಆರೋಪಿ ಆಗಿದ್ರು. ಸಂತೋಷ ಕಡೆಯಿಂದ 40% ಕಮಿಷನ್ ಕೇಳಿದ್ರು. ನಾವೆಲ್ಲ ಕಾಂಗ್ರೆಸ್ ನಾಯಕರು ಅವರ ಮನೆಗೆ ಹೋಗಿದ್ವಿ. ಆ ಸಂದರ್ಭದಲ್ಲಿ ಸಂತೋಷ ಪತ್ನಿ ಹೇಳಿದ್ರು.. ನ‌ನ್ನ ಪತಿ ಸಾವಿಗೆ ಈಶ್ವರಪ್ಪನವರೇ ಕಾರಣವೆಂದಿದ್ರು. ಕರ್ನಾಟಕದಲ್ಲಿರೋ ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಮಾಜಿ ಸಚಿವ ಈಶ್ವರಪ್ಪ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಹರಿಹಾಯ್ದರು.

ಪ್ರತಿ ಮನೆಗೂ 200 ಯೂನಿಟ್​ ವಿದ್ಯುತ್​.. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಕರ್ನಾಟಕದ ಜನತೆಯ ಸಂಕಷ್ಟಗಳನ್ನು ಪರಿಹಾರ ಮಾಡುವುದೇ ಪ್ರಜಾಧ್ವನಿ ಕಾರ್ಯಕ್ರಮದ ಉದ್ದೇಶ. ಈ ಭಾಗದಿಂದ ನಾಂದಿ ಹಾಡಿದ್ದೇವೆ. ಭಾರತದ ಜನತೆ ಬೆಲೆ ಏರಿಕೆಯಿಂದ ನಲುಗಿ ಹೋಗಿದೆ. ಕರ್ನಾಟಕ ಜನತೆಯ ಕಷ್ಟ ಕಾರ್ಪಣ್ಯಗಳನ್ನು ತೊಲಗಲಿ ಎಂದು ಕಾಂಗ್ರೆಸ್ ನಾಯಕರು ಚರ್ಚೆ ಮಾಡಿದ್ದೇವೆ. ಹೀಗಾಗಿ ಪ್ರತಿ ಮನೆಗೂ ಉಚಿತವಾಗಿ 200 ಯೂನಿಟ್ ವಿದ್ಯುತ್ ನೀಡಲಾಗುವುದು. ವೇದಿಕೆಯ ಮೇಲೆಯೇ ವಿದ್ಯುತ್ ಉಚಿತ ಎನ್ನುವ ಭಿತ್ತಿಚಿತ್ರಗಳನ್ನು ಕಾಂಗ್ರೆಸ್ ನಾಯಕರು ಪ್ರದರ್ಶನ ಮಾಡಿದರು.

ಇನ್ಮೇಲೆ ನೀವ್ಯಾರು ಕರೆಂಟ್‌ಗೆ ದುಡ್ಡು ಕಟ್ಟುವಂತಿಲ್ಲ. ಇದು ಕಾಂಗ್ರೆಸ್ ಪಕ್ಷದ ಸಂಕಲ್ಪ. ನುಡಿದಂತೆ ನಾವು ನಡೆದಿದ್ದೇವೆ. ಬಿಜೆಪಿ ಸರ್ಕಾರ ಬಿ-ರಿಪೋರ್ಟ್ ಬರೆಯುವ ಸರ್ಕಾರ. ಭ್ರಷ್ಟಾಚಾರವನ್ನು ತನಿಖೆ ಮಾಡುವ ಮುಂಚೆಯೇ ಬಿ-ರಿಪೋರ್ಟ್ ನೀಡ್ತಾರೆ. ಇಂತಹ ಬಿ-ರಿಪೋರ್ಟ್ ಸರ್ಕಾರವನ್ನು ನಾವು ಇಟ್ಟುಕೊಳ್ಳಬೇಕಾ..? ಜನರ ಮನಸ್ಸಿನಲ್ಲಿ ಕೋಮು ದ್ವೇಷದ ವಿಷಬೀಜವನ್ನು ಬಿಜೆಪಿ ಸರ್ಕಾರ ಬಿತ್ತುತ್ತಿದೆ. ಅವರದೇ ಶಾಸಕರು ಯಾವ್ಯಾವ ಅಧಿಕಾರಕ್ಕೆ ಎಷ್ಟೆಷ್ಟು ಹಣ ನೀಡಬೇಕು ಅನ್ನುವುದರ ಕುರಿತು ಹೇಳಿಕೆ ನೀಡ್ತಾರೆ. ಗುತ್ತಿಗೆದಾರ ಸಂತೋಷ ಕುಟುಂಬಕ್ಕೆ ಬಿಜೆಪಿ ಸರ್ಕಾರದಿಂದ ನ್ಯಾಯ ಸಿಕ್ಕಿಲ್ಲ. ಮೀಸಲಾತಿ ವಿಚಾರದಲ್ಲಿ ಸರ್ಕಾರ ನಾಟಕವಾಡ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಓದಿ:ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ : ಡಿ ಕೆ ಶಿವಕುಮಾರ್

ABOUT THE AUTHOR

...view details