ಬೆಳಗಾವಿ:ಲಿಂಗಾಯತ ಒಳಪಂಗಡಗಳನ್ನು ಇಟ್ಟುಕೊಂಡು ನಾವು ಮುಂದುವರಿದರೆ ಮುಂದಿನ ದಿನಗಳಲ್ಲಿ ನಮಗೆಲ್ಲಾ ಒಳ್ಳೆಯ ದಿನಗಳಿವೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು. ನಗರದ ವೀರಶೈವ ಲಿಂಗಾಯತ ವಿದ್ಯಾರ್ಥಿ ವಸತಿ ನಿಲಯ ಆವರಣದಲ್ಲಿ ಶನಿವಾರ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕ ಆಯೋಜಿಸಿದ್ದ ವಿಧಾನಸಭೆಗೆ ಆಯ್ಕೆಯಾದ ಶಾಸಕ, ಸಚಿವರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
ವೇದಿಕೆ ಮೇಲೆ ಇದ್ದಾಗ ಮಾತ್ರ ನಾವೆಲ್ಲಾ ಒಂದು ಎನ್ನುವ ಚಿಂತನೆ ಆಗುತ್ತದೆ. ವೇದಿಕೆ ಇಳಿದ ಮೇಲೆ ಅದರ ರೂಪುರೇಷೆಗಳೇ ಬದಲಾಗುತ್ತವೆ. ಈ ನಿಟ್ಟಿನಲ್ಲಿ ಹಿರಿಯರಾದ ನೀವು ಎಲ್ಲರನ್ನೂ ಒಗ್ಗೂಡಿಸಿ ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕು. ಇದು ಇವತ್ತಿನ ಸಂದರ್ಭದಲ್ಲಿ ಅತ್ಯಂತ ಅವಶ್ಯಕವಾಗಿದೆ. ಬಹಳಷ್ಟು ಜನರು ಒಳಪಂಗಡಗಳ ಕಡೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಅದು ಮುಂದಿನ ದಿನಗಳಲ್ಲಿ ನಮಗೆಲ್ಲಾ ಮಾರಕವಾಗಲಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಲಿಂಗಾಯತ ಒಳಪಂಗಡಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಲು ಪರಮಪೂಜ್ಯ ಸ್ವಾಮೀಜಿಗಳು ಹೆಚ್ಚು ಒತ್ತು ನೀಡಬೇಕು. ಅಂದಾಗ ಮಾತ್ರ ಏನಾದರು ಸಾಧನೆ ಮಾಡಲು, ಸಮಾಜ ಉಳಿಸಲು ಮತ್ತು ಬೆಳೆಸಲು ಸಾಧ್ಯವಾಗುತ್ತದೆ. ಇವತ್ತಿನ ಪರಿಸ್ಥಿತಿಯಲ್ಲಿ ಸಮಾಜ ಹೋಗುತ್ತಿರುವ ದಿಕ್ಕು ನೋಡಿದರೆ ಮುಂದೆ ಕಷ್ಟದ ದಿನಗಳು ಬರುತ್ತವೆ. ನಮ್ಮನ್ನು ಒಡೆದು ಆಳುವ ನೀತಿ ಬಹಳ ದೂರವಿಲ್ಲ. ಈ ನಿಟ್ಟಿನಲ್ಲಿ ಸಮಾಜದ ಹಿರಿಯರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಪ್ರಭಾಕರ್ ಕೋರೆ ಅವರು, 12ನೇ ಶತಮಾನದಲ್ಲಿ ಆರಂಭಗೊಂಡಿರುವ ಶಿಕ್ಷಣ ಪ್ರಸಾರ ಇಂದಿಗೂ ನಿಂತಿಲ್ಲ. ಸಿರಸಂಗಿ ಟ್ರಸ್ಟ್ನ ಸಹಾಯದಿಂದ ಸಹಾಯ ಪಡೆದು ದೇಶ ಕಟ್ಟಿದವರು ನಮ್ಮಲ್ಲಿದ್ದಾರೆ. ಬಡ ಹೆಣ್ಣು ಮಕ್ಕಳ ಸಲುವಾಗಿ ಪ್ರತಿ ಜಿಲ್ಲೆಯಲ್ಲಿ ವಸತಿ ನಿಲಯ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಬೆಂಗಳೂರು ನಂತರ ಬೆಳಗಾವಿಯಲ್ಲಿ ವಸತಿ ನಿಲಯ ನಿರ್ಮಾಣಗೊಳ್ಳುತ್ತಿದೆ ಎಂದರು.