ಬೆಳಗಾವಿ:ಅತಿವೃಷ್ಟಿ, ಅನಾವೃಷ್ಟಿಯಿಂದ ಅಪಾರ ಪ್ರಮಾಣದಲ್ಲಿ ಆಸ್ತಿ ಹಾಗೂ ಬೆಳೆ ಹಾನಿಯಾಗಿದೆ. ಈಗಾಗಲೇ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇನೆ. ನನ್ನ ಕ್ಷೇತ್ರದ ಸಮಸ್ಯೆಗೆ ಸ್ಪಂದಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ಶಾಸಕ ಮಹೇಶ ಕುಮಟಳ್ಳಿ ಹೇಳಿದರು.
ಕ್ಷೇತ್ರದ ಸಮಸ್ಯೆಗೆ ಸ್ಪಂದಿಸುವುದಾಗಿ ಸಿಎಂ ಭರವಸೆ: ಶಾಸಕ ಕುಮಟಳ್ಳಿ - flood in belgavi
ಬೆಳಗಾವಿ ಜಿಲ್ಲೆ ಅಥಣಿ ಕ್ಷೇತ್ರದಲ್ಲಿ ಅತಿವೃಷ್ಟಿ, ಅನಾವೃಷ್ಟಿ ಉಂಟಾಗಿದ್ದು, ಸಿಎಂ ಗಮನಕ್ಕೆ ತರಲಾಗಿದೆ. ಶೀಘ್ರವೇ ಪರಿಹಾರ ನೀಡುವ ಭರವಸೆ ನೀಡಿದ್ದಾರೆ ಎಂದು ಶಾಸಕ ಮಹೇಶ ಕುಮಟಳ್ಳಿ ಹೇಳಿದರು.
ಸಿಎಂ ಸಭೆ ಬಳಿಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಅಥಣಿ ಕ್ಷೇತ್ರದ ಅರ್ಧ ಭಾಗದಲ್ಲಿ ಅತಿವೃಷ್ಟಿ ಉಂಟಾಗಿದೆ. ಇನ್ನರ್ಧ ಭಾಗ ಅನಾವೃಷ್ಟಿಗೆ ತುತ್ತಾಗುತ್ತದೆ. ಕಳೆದ ವರ್ಷದ ಪ್ರವಾಹದ ವೇಳೆ ಅಥಣಿ ಕ್ಷೇತ್ರದಲ್ಲಿ 17 ಸಾವಿರಕ್ಕೂ ಅಧಿಕ ಮನೆಗಳು ಉರಳಿವೆ. ಇದರಲ್ಲಿ ಶೇ. 50 ರಷ್ಟು ಮನೆಗಳಿಗೆ ಮಾತ್ರ ಪರಿಹಾರ ಬಂದಿದೆ ಎಂದರು.
ಉಳಿದ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಇನ್ನು ಅನಾವೃಷ್ಟಿಯಿಂದ ದ್ರಾಕ್ಷಿ ಸೇರಿದಂತೆ ಅನೇಕ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. ಹೀಗಾಗಿ ಕಳೆದ ವರ್ಷದ ಹಾನಿಯ ಪರಿಹಾರ ನೀಡುವಂತೆ ಸಭೆಯಲ್ಲಿ ಮನವಿ ಮಾಡಲಾಗಿದೆ. ಸಿಎಂ ಸ್ಪಂದಿಸಿದ್ದು, ಶೀಘ್ರವೇ ಪರಿಹಾರದ ಹಣ ಬಿಡುಗಡೆ ಮಾಡುವ ವಿಶ್ವಾಸ ನಮಗಿದೆ ಎಂದರು.