ಬೆಳಗಾವಿ:ಆತ ಎರಡು ಮದುವೆಯಾಗಿ ಸಂಸಾರದಲ್ಲಿ ಬೇಸರಗೊಂಡು 2ನೇ ಹೆಂಡತಿ ಮಗನೊಂದಿಗೆ 15 ವರ್ಷಗಳ ಹಿಂದೆಯೇ ಹುಟ್ಟೂರು ಬಿಟ್ಟಿದ್ದಾನೆ. ನಂತರ ಅಲ್ಲಿಂದ ತಾಲೂಕಿನ ಬೆಳಗುಂದಿ ಗ್ರಾಮಕ್ಕೆ ಬಂದು ಅಲ್ಲಿ ಬೇಕರಿ ವ್ಯವಹಾರ ಆರಂಭಿಸಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಹತ್ಯೆಗೀಡಾಗಿದ್ದಾನೆ.
ಬೆಳಗಾವಿ ತಾಲೂಕಿನ ಬಸೂರ್ತಿ ಗ್ರಾಮದ ನಿವಾಸಿ ಗಜಾನನ ನಾಯಕ್ (48) ಹತ್ಯೆಯಾದ ವ್ಯಕ್ತಿ. ಭಾನುವಾರ ರಾತ್ರಿ ಮನೆಯಲ್ಲಿ ಒಬ್ಬನೇ ಇರೋದನ್ನ ಗಮನಿಸಿದ್ದ ದುಷ್ಕರ್ಮಿಗಳು ಈತನ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ.
ಮೃತ ವ್ಯಕ್ತಿಯ ಕುರಿತು ಸಂಬಂಧಿಕರು ಮಾತನಾಡಿದ್ದಾರೆ 17 ವರ್ಷದ ಮಗ ಅವಧೂತ್ ಅವರೊಂದಿಗೆ ಇದ್ದ ಗಜಾನನ ಕೊಲೆಯಾಗುವ ಹಿಂದಿನ ದಿನ ಮಗನನ್ನ ತಂದೆ ಮನೆಗೆ ಹೋಗಿ ಬಿಟ್ಟು ಬಂದಿದ್ದ. ಹೀಗೆ ಬಿಟ್ಟು ಬರುವಾಗ ಅವರೊಬ್ಬರು ಭೇಟಿಗೆ ಬರ್ತಿದ್ದಾರೆ ಅನ್ನೋ ವಿಚಾರವನ್ನೂ ಹೇಳಿ ಬಂದಿದ್ದನಂತೆ.
ಇದಾದ ಬಳಿಕ ಮಾರನೇ ದಿನ ಸೋಮವಾರ ಬೆಳಗ್ಗೆ ಬುಕ್ಸ್ ತರಲೆಂದು ಮಗ ಮನೆಗೆ ವಾಪಸ್ ಹೋಗಿದ್ದಾನೆ. ಒಳ ಹೋಗಿ ನೋಡಿದಾಗ ತಂದೆ ಬೆಡ್ ರೂಮ್ ನಲ್ಲಿ ಹೆಣವಾಗಿ ಬಿದ್ದಿದ್ದನ್ನು ಕಂಡ ಕೂಡಲೇ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದಾನೆ. ಇತ್ತ ಸ್ಥಳಕ್ಕೆ ಬಂದ ಗ್ರಾಮೀಣ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಶವವನ್ನ ಜಿಲ್ಲಾಸ್ಪತ್ರೆಗೆ ರವಾನಿಸಿದರು. ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಶವ ನೀಡಿದ್ದಾರೆ. ಮಂಗಳವಾರ ತಡರಾತ್ರಿ ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ತಂದೆಯ ಬೇಕರಿಯಲ್ಲಿ ವಿದ್ಯಾ ಪಾಟೀಲ್ ಎಂಬಾಕೆ ಕೆಲಸಕ್ಕೆ ಸೇರಿಕೊಂಡಿದ್ದಳು. ಅವಳು ತನ್ನ ತಂದೆಯನ್ನ ಭೇಟಿಯಾಗಲು ಬರುತ್ತೇನೆ ಎಂಬ ವಿಚಾರವನ್ನು ಅಪ್ಪ ನನ್ನ ಬಳಿ ಹೇಳಿದ್ರು ಅಂತ ಮಗ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಇದರ ಜಾಡು ಹಿಡಿದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಅನೈತಿಕ ಸಂಬಂಧದ ಹಿನ್ನೆಲೆ ಕೊಲೆ ಶಂಕೆ..ಗಜಾನನ ನಾಯಕ್ ಬೇಕರಿ ಆರಂಭಿಸಿದಾಗ ವಿದ್ಯಾ ಪಾಟೀಲ್ ಎಂಬಾಕೆ ತನಗೆ ಗಂಡನಿಲ್ಲ, ಎರಡು ಮಕ್ಕಳಿದ್ದು ಸಾಕುವುದು ಕಷ್ಟವಾಗ್ತಿದೆ. ಕೆಲಸ ಕೊಡಿ ಅಂತಾ ಕೇಳಿಕೊಂಡು ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಹೀಗೆ ಬಂದಾಕೆ ನಂತರ ಗಜಾನನ ಬೇಕರಿಯಲ್ಲೇ ಉಳಿದುಕೊಳ್ಳುತ್ತಾಳೆ.
ಆಗ ಇಬ್ಬರ ನಡುವೆ ಅನೈತಿಕ ಸಂಬಂಧ ಶುರುವಾಗಿ ಆಕೆಗೆ ಹಣ ಸೇರಿದಂತೆ ನಾಲ್ಕು ವರ್ಷದ ಹಿಂದೆ ಗಜಾನನ ಮನೆ ಕೂಡ ಕಟ್ಟಿಸಿಕೊಟ್ಟಿರುತ್ತಾನಂತೆ. ಇದಾದ ಬಳಿಕ ಕೊರೊನಾ ವೇಳೆ ಬೇಕರಿ ಬ್ಯುಸಿನೆಸ್ ನಷ್ಟವಾಗಿ ಬೇರೆಯವರಿಗೆ ಬೇಕರಿ ಮಾರಾಟ ಮಾಡಿ ಈತ ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸುತ್ತಾನೆ. ಬೇಕರಿ ಬಂದ್ ಆಗಿದ್ದಕ್ಕೆ ವಿದ್ಯಾ ಗೋವಾಕ್ಕೆ ತೆರಳುತ್ತಾಳೆ.
ಹೀಗೆ ಹೋಗುವಾಗ ತಾನು ನೀಡಿದ್ದ ಹಣ ವಾಪಸ್ ಕೊಡುವಂತೆ ಗಜಾನನ ಕೇಳಿರುತ್ತಾನಂತೆ. ಅದಷ್ಟೇ ಅಲ್ಲದೆ ಮನೆ ನಂದು, ಅದನ್ನು ಖಾಲಿ ಮಾಡು ಅಂತಾ ಕೂಡ ಹೇಳಿರುತ್ತಾನಂತೆ. ಇದನ್ನ ಸಹಿಸಿಕೊಳ್ಳಲು ಆಗದ ವಿದ್ಯಾ ಮೊನ್ನೆಯಷ್ಟೇ ಊರಿಗೆ ವಾಪಸ್ ಆಗಿ ನಿನ್ನ ಜತೆಗೆ ಮಾತನಾಡುವುದಿದೆ ಅಂತಾ ಹೇಳಿದ್ದಳಂತೆ.
ಹೀಗೆ ನೆಪವೊಡ್ಡಿ ವಿದ್ಯಾ ಪಾಟೀಲ್ ತನ್ನ ತಂದೆಯನ್ನು ಭೇಟಿಯಾಗಿ ಹತ್ಯೆ ಮಾಡಿದ್ದು, ನಮ್ಮಪ್ಪ ಪ್ರತಿದಿನ ಬರೆದಿಡುತ್ತಿದ್ದ ಡೈರಿ ಹಾಗೂ ಅವರ ಫೋನ್‌ನೊಂದಿಗೆ ಪರಾರಿಯಾಗಿದ್ದಾರೆ ಅಂತಾ ಗಜಾನನ ಮಗ ಅವಧೂತ್ ಆರೋಪ ಮಾಡುತ್ತಿದ್ದಾನೆ.
ಸದ್ಯ ವಿದ್ಯಾ ಬೆನ್ನು ಬಿದ್ದಿರುವ ಪೊಲೀಸರು, ಕೊಲೆಗೆ ಕಾರಣ ಏನು?. ಆಕೆ ಒಬ್ಬಳೇ ಈ ಕೊಲೆ ಮಾಡಿದ್ದಾಳಾ? ಅಥವಾ ಬೇರೆಯವರ ಜತೆಗೆ ಸೇರಿಕೊಂಡು ಕೊಲೆ ಮಾಡಿದ್ದಾಳಾ? ಅನ್ನೋದನ್ನ ತನಿಖೆ ನಡೆಸುತ್ತಿದ್ದಾರೆ.
ಓದಿ:ಯಾದಗಿರಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟ ಪ್ರಕರಣ : ಮೃತರ ಸಂಖ್ಯೆ 7ಕ್ಕೆ ಏರಿಕೆ