ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಆಕ್ರೋಶ ಬೆಳಗಾವಿ : ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಸರ್ಕಾರ ಕರ್ನಾಟಕದ ಗಡಿಯೊಳಗಿನ ಮರಾಠಿ ಭಾಷಿಕರಿಗೆ ಆರೋಗ್ಯ ಪರಿಹಾರ ನಿಧಿ ಮಂಜೂರು ಮಾಡಿದೆ. ಇದು ಗಡಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಈ ವಿಚಾರವಾಗಿ ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಮಾತನಾಡಿ, ಇದೊಂದು ದೊಡ್ಡ ದುರಂತ. ಇದಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗುತ್ತದೆ. ಮಹಾರಾಷ್ಟ್ರ ಸರ್ಕಾರ ಇಲ್ಲಿ ತನ್ನ ಯೋಜನೆ ಆರಂಭಿಸಿದೆ. ಆದರೆ ಜಿಲ್ಲಾಡಳಿತ, ಪೊಲೀಸರು ಏನು ಮಾಡುತ್ತಿದ್ದಾರೆ..? ತಕ್ಷಣವೇ ಜಿಲ್ಲಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಈ ಯೋಜನೆ ನಿಲ್ಲಿಸಬೇಕು. ಇಲ್ಲದಿದ್ದರೆ ಆ ಐದೂ ಕೇಂದ್ರಗಳನ್ನು ಕರವೇ ಬಂದ್ ಮಾಡಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಏನಿದು ಯೋಜನೆ?:ಇತ್ತೀಚಿಗೆ ಬೆಳಗಾವಿಗೆ ಆಗಮಿಸಿದ್ದ ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಬಾಲ್ಕಿ ಸೇರಿದಂತೆ 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು. ಅಲ್ಲದೇ ಈ ಭಾಗದ ಮರಾಠಿಗರಿಗೆ ಆರೋಗ್ಯ ವಿಮೆ ಜಾರಿ ಮಾಡುತ್ತೇವೆ ಎಂದಿದ್ದರು. ಅಲ್ಲದೇ ಆ ಯೋಜನೆ ಕುರಿತು ಕೈಪಿಡಿ ಕೂಡ ಬಿಡುಗಡೆ ಮಾಡಿದ್ದರು. ಅದರ ಬೆನ್ನಲ್ಲೆ ಈಗ ಮಹಾರಾಷ್ಟ್ರ ಸರ್ಕಾರ ಪರಿಹಾರ ನಿಧಿ ಮಂಜೂರು ಮಾಡಿದೆ. ಪರಿಹಾರ ನಿಧಿ ಜೊತೆಗೆ ಮಹಾತ್ಮ ಫುಲೆ ಆರೋಗ್ಯ ವಿಮಾ ಯೋಜನೆ ಜಾರಿ ಮಾಡಿದೆ.
ಇದೀಗ ಬೆಳಗಾವಿಯಲ್ಲಿ ಮಹಾರಾಷ್ಟ್ರದ ಆರೋಗ್ಯ ವಿಮೆ ಯೋಜನೆಗೆ ಅರ್ಜಿ ಸಹ ಸ್ವೀಕರಿಸಲಾಗುತ್ತಿದೆ. ಬೆಳಗಾವಿ ಮಹಾನಗರ ವ್ಯಾಪ್ತಿಯಲ್ಲಿ ಐದು ಕಡೆ ಅರ್ಜಿ ಸ್ವೀಕಾರ ಕೇಂದ್ರ ತೆರೆಯಲಾಗಿದ್ದು, ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಶಿಫಾರಸು ಪತ್ರದೊಂದಿಗೆ ಅರ್ಜಿ ಸ್ವೀಕರಿಸಲಾಗುತ್ತಿದೆ. ಈಗಾಗಲೇ ಅರ್ಜಿ ಪ್ರಕ್ರಿಯೆ ಕೂಡ ಆರಂಭವಾಗಿದೆ. ಈ ಯೋಜನೆ ಬೆಳಗಾವಿ ನಗರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಜಾರಿಗೆ ಬಂದಿದೆ.
ಯೋಜನೆ ಜಾರಿ ಹಿಂದಿನ ಘಟನೆ ಹೀಗಿದೆ:ಖಾನಾಪುರ ತಾಲೂಕಿನ ರಂಜನಾ ದೇಸಾಯಿ ಹೃದಯ ಶಸ್ತ್ರ ಚಿಕಿತ್ಸೆಗಾಗಿ ಡಿಸೆಂಬರ್ ತಿಂಗಳಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಮಹಾರಾಷ್ಟ್ರ ಏಕೀಕರಣ ಸಮಿತಿ ಹೆಸರಿನ ಲೇಟರ್ ಹೆಡ್ನಲ್ಲಿ ಈ ಬಗ್ಗೆ ಶಿಫಾರಸು ಕೂಡಾ ಮಾಡಲಾಗಿತ್ತು. ಶಿಫಾರಸು ಪತ್ರದಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಅವರಿಗೆ ಮತ್ತು ಜೈ ಮಹಾರಾಷ್ಟ್ರ ಎಂದು ಉಲ್ಲೇಖಿಸಲಾಗಿತ್ತು ಎಂದು ತಿಳಿದು ಬಂದಿತ್ತು. ರಂಜನಾ ದೇಸಾಯಿ ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷ್ಠಾವಂತ ಕಾರ್ಯಕರ್ತೆ ಆಗಿದ್ದಾರೆ. ರಂಜನಾ ದೇಸಾಯಿ ಅವರ ಹೃದಯ ಚಿಕಿತ್ಸೆಗೆ ಹಣಕಾಸಿನ ಅಗತ್ಯವಿದೆ. ಅಗತ್ಯ ಹಣಕಾಸಿನ ನೆರವು ನೀಡುವಂತೆ ಎಂಇಎಸ್ ಪುಂಡರು ಶಿಫಾರಸು ಪತ್ರ ನೀಡಿದ್ದರು. ಅದರಂತೆ ಇದೀಗ ಹೃದಯ ಶಸ್ತ್ರ ಚಿಕಿತ್ಸೆ ಮಾಡಿದ ಬೆಳಗಾವಿಯ ಅರಿಹಂತ ಆಸ್ಪತ್ರೆಗೆ ಮಹಾರಾಷ್ಟ್ರ ಸಿಎಂ ನಿಧಿಯಿಂದ 1 ಲಕ್ಷ ರೂ. ಹಣ ಸಂದಾಯವಾಗಿದೆ.
ಇದನ್ನೂ ಓದಿ :ಬಿಡುಗಡೆಯಾಗದ ಬರ ಪರಿಹಾರದ ಹಣ: ರಾಜಭವನದ ಕದ ತಟ್ಟಿದ ಬಿಜೆಪಿ