ಕರ್ನಾಟಕ

karnataka

ETV Bharat / state

ಮಹಾರಾಷ್ಟ್ರ- ಗೋವಾ ಲಾಕ್​ಡೌನ್: ಬೆಮುಲ್​ಗೆ ಕೋಟಿ ಕೋಟಿ ನಷ್ಟ!

ಕೊರೊನಾ ನಿಯಂತ್ರಣಕ್ಕೆ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಲಾಕ್​ಡೌನ್​ ಘೋಷಣೆ ಆಗಿದೆ. ಇನ್ನು ಕರ್ನಾಟಕದಲ್ಲಿ ಕೂಡ ಜನತಾ ಕರ್ಪ್ಯೂ ಜಾರಿಯಿದೆ. ಇದರಿಂದ ಮಾರುಕಟ್ಟೆ ಸಮಸ್ಯೆ ಎದುರಿಸುತ್ತಿರುವ ಕೆಎಂಎಫ್​ನ ನಂದಿನಿ ಹಾಲು ಪೂರೈಕೆ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡಿದೆ.

ಬೆಮುಲ್
ಬೆಮುಲ್

By

Published : Jun 9, 2021, 3:27 PM IST

ಬೆಳಗಾವಿ: ಕರ್ನಾಟಕದಲ್ಲೇ ಅತಿಹೆಚ್ಚು ಎಮ್ಮೆ ಹಾಲು ಖರೀದಿ ಹಾಗೂ ಪೂರೈಸುವ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಬೆಮುಲ್) ಕೊರೊನಾ ಹೊಡೆತಕ್ಕೆ ನಲುಗಿದೆ. ಎರಡೇ ತಿಂಗಳಲ್ಲಿ ಬೆಮುಲ್​ಗೆ ಮೂರು ಕೋಟಿ ರೂ. ನಷ್ಟ ಅನುಭವಿಸಿದೆ.

ಕರ್ನಾಟಕ ಸೇರಿ ನೆರೆಯ ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಲಾಕ್​ಡೌನ್​ ಘೋಷಣೆ ಆಗಿದೆ. ಇನ್ನು ಕರ್ನಾಟಕದಲ್ಲಿ ಕೂಡ ಜನತಾ ಕರ್ಪ್ಯೂ ಜಾರಿಯಿದೆ. ಇದರಿಂದ ಮಾರುಕಟ್ಟೆ ಸಮಸ್ಯೆ ಎದುರಿಸುತ್ತಿರುವ ಕೆಎಂಎಫ್​ನ ನಂದಿನಿ ಹಾಲು ಪೂರೈಕೆ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡಿದೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ಬೆಮುಲ್​ನ ಪ್ರಧಾನ ವ್ಯವಸ್ಥಾಪಕ ಡಾ. ಜಯಪ್ರಕಾಶ್ ಮನ್ನೇರಿ

ಲಾಕ್​​ಡೌನ್​ನಿಂದ ಕೆಎಂಎಫ್​ಗೆ ಹೊಡೆತ:
ನೆರೆಯ ಗೋವಾ ರಾಜ್ಯ, ಹಾಲು-ತರಕಾರಿಗೆ ಬೆಳಗಾವಿಯನ್ನೇ ಅವಲಂಬಿಸಿದೆ. ಇನ್ನು ದಕ್ಷಿಣ ಭಾರತದಲ್ಲಿ ಜನಪ್ರಿಯತೆ ಗಳಿಸಿರುವ ಕೆಎಂಎಫ್​ನ ನಂದಿನಿ ಹಾಲು ಮಹಾರಾಷ್ಟ್ರದ ಪುಣೆ ನಗರಕ್ಕೆ ಬೆಳಗಾವಿಯಿಂದಲೇ ಅತಿ ಹೆಚ್ಚು ಪೂರೈಕೆ ಆಗುತ್ತದೆ. ಅಲ್ಲದೇ ಆಂಧ್ರಪ್ರದೇಶ ಹಾಗೂ ಜಮ್ಮು ಕಾಶ್ಮೀರಕ್ಕೂ ಇಲ್ಲಿಂದ ಹೆಚ್ಚಿನ ಪ್ರಮಾಣದಲ್ಲಿ ಹಾಲು ಪೂರೈಕೆ ಆಗುತ್ತದೆ.

ಈ ಮೊದಲು ಬೆಳಗಾವಿಯಿಂದ ಗೋವಾಕ್ಕೆ ನಿತ್ಯ 50 ಸಾವಿರ ಹಾಗೂ ಪುಣೆಗೆ 35 ಸಾವಿರ ಲೀಟರ್ ಹಾಲು ಪೂರೈಕೆ ಆಗುತ್ತಿತ್ತು. ಇದೀಗ ಲಾಕ್​ಡೌನ್ ಜಾರಿಯಿಂದ ಹೋಟೆಲ್ ಉದ್ಯಮ ಹಾಗೂ ಜನರ ಸಂಚಾರ ನಿಂತಿದೆ. ಪುಣೆಗೆ 5 ಸಾವಿರ ಹಾಗೂ ಗೋವಾಕ್ಕೆ 12 ಸಾವಿರ ಲೀಟರ್ ಮಾತ್ರ ಹಾಲು ಪೂರೈಕೆ ಆಗುತ್ತಿದೆ. ಉಭಯ ರಾಜ್ಯಗಳ ಮಾರುಕಟ್ಟೆ ಸಮಸ್ಯೆಯಿಂದ ಬೆಮುಲ್ ಸಮಸ್ಯೆಗೆ ಸಿಲುಕಿದೆ.

38 ಸಾವಿರ ರೈತರ ಹಿತಕ್ಕೆ ಮುಂದಾದ ಬೆಮುಲ್:
ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ ಬೆಳಗಾವಿ ಜಿಲ್ಲೆಯ 38 ಸಾವಿರ ರೈತರು ಹಾಲು ಪೂರೈಸುತ್ತಾರೆ. ಆದ್ದರಿಂದ ಕೋವಿಡ್ ಸಮಯದಲ್ಲಿ ಬೆಮುಲ್ ರೈತರ ಹಿತ ಕಾಯುತ್ತಿದೆ. ಖಾಸಗಿ ಡೈರಿಯಿಂದ ಇಲ್ಲಿನ ಬೆಮುಲ್​ಗೆ ಹಾಲಿನ ಪೂರೈಕೆ ಸ್ಥಗಿತಗೊಳಿಸಲಾಗಿದೆ‌. ಕೇವಲ ರೈತರಿಂದ ಮಾತ್ರ ಹಾಲು ಖರೀದಿಸಲಾಗುತ್ತಿದೆ. ಅಲ್ಲದೇ ವಾರಕ್ಕೊಮ್ಮೆ ನಿಯಮಿತವಾಗಿ ಸ್ಥಳೀಯ ಸಂಘಗಳ ಮೂಲಕ ಬಿಲ್ ಪಾವತಿಸಲಾಗುತ್ತಿದೆ. ಹೋಟೆಲ್, ಬೇಕರಿಗಳು ಬಂದ್ ಆಗಿರುವ ಕಾರಣಕ್ಕೆ ಖಾಸಗಿ ಡೈರಿಗಳು ಕೆಎಂಎಫ್ ಮೊರೆ ಹೊಗುತ್ತಿವೆ. ಆದರೆ ಬೆಮುಲ್ ರೈತರಿಂದ ಮಾತ್ರ ಹಾಲು ಪಡೆಯುವ ಮೂಲಕ ರೈತರ ಹಿತ ಕಾಯುತ್ತಿದೆ.

ಸಾಧ್ಯವಾಗದ ಸಂಘಗಳ ಹೆಚ್ಚಳ
ಜಿಲ್ಲೆಯಲ್ಲಿ 614 ಸಂಘಗಳ ಮೂಲಕ ಜಿಲ್ಲೆಯ 38 ಸಾವಿರ ರೈತರಿಂದ ಬೆಮುಲ್​ಗೆ ನಿತ್ಯ 2.10 ಸಾವಿರ ಲೀ. ಹಾಲು ಪೂರೈಕೆ ಆಗುತ್ತದೆ. ಪ್ರತಿವರ್ಷ ಕನಿಷ್ಠ ‌100 ಸಂಘಗಳ ಸ್ಥಾಪನೆಗೆ ಬೆಮುಲ್ ಉದ್ದೇಶಿಸಿತ್ತು. ಆದರೆ, ಕಳೆದ ಎರಡು ವರ್ಷಗಳಿಂದ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಹೀಗಾಗಿ ಗ್ರಾಮೀಣ ಭಾಗಗಳಲ್ಲಿ ಹೊಸ ಸಂಘ ಸ್ಥಾಪನೆ ಸಾಧ್ಯವಾಗುತ್ತಿಲ್ಲ ಎಂದು ಬೆಮುಲ್​ನ ಪ್ರಧಾನ ವ್ಯವಸ್ಥಾಪಕ ಡಾ. ಜಯಪ್ರಕಾಶ್ ಮನ್ನೇರಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ABOUT THE AUTHOR

...view details