ಅಥಣಿ(ಬೆಳಗಾವಿ): ತಾಲೂಕಿನ ರೈತರು ಹೈನುಗಾರಿಕೆಗೆಂದು ಸಾಕುತ್ತಿದ್ದ ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದ ತಂಡವನ್ನು ಅಥಣಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಜಾನುವಾರು ಕಳ್ಳರ ಬಂಧನ: ನಿಟ್ಟುಸಿರು ಬಿಟ್ಟ ಜನ ಕಳೆದ 15 ದಿನಗಳ ಹಿಂದೆ ಸತ್ತಿ ಗ್ರಾಮದ ಹೊರವಲಯದ ತೋಟದಲ್ಲಿ ವಾಸವಾಗಿರುವ ರೈತ ರಾಯಣ್ಣ ಸಿಂಧೂರ ಎಂಬುವರ ಅಂದಾಜು ಎರಡು ಲಕ್ಷ ರೂ. ಬೆಳೆಬಾಳುವ ಎರಡು ಎಮ್ಮೆಗಳು ರಾತ್ರೋರಾತ್ರಿ ಕಳ್ಳತನವಾಗಿದ್ದವು. ಈ ಸಂಬಂಧ ಗ್ರಾಮಸ್ಥರು ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ದೂರಿನ ಆಧಾರದ ಮೇಲೆ ಕಾರ್ಯಪ್ರವೃತ್ತರಾದ ಅಥಣಿ ಡಿವೈಎಸ್ಪಿ ಎಸ್. ವಿ. ಗಿರೀಶ್ ಅವರ ನೇತೃತ್ವದ ಪೊಲೀಸ್ ತಂಡ ಪಿಎಸ್ಐ ಕುಮಾರ್ ಹಾಡ್ಕರ ಅವರ ಮುಂದಾಳತ್ವದಲ್ಲಿ ಪ್ರಕರಣ ಭೇದಿಸಿ ಆರು ಜನ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳೆಲ್ಲರೂ ಜಿಲ್ಲೆಯ ರಾಯಬಾಗ ತಾಲೂಕಿನವರು ಎಂದು ತಿಳಿದು ಬಂದಿದೆ. ಇವರು ಅಥಣಿ, ಕಾಗವಾಡ, ರಾಯಭಾಗದ ಸುತ್ತಮುತ್ತಲಿನ ನಿರ್ಜನ ಪ್ರದೇಶದಲ್ಲಿ ವಾಸವಾಗಿರುವ ರೈತರ ದನಕರು, ಮೇಕೆಗಳನ್ನು ಕಳ್ಳತನ ಮಾಡುತಿದ್ದರು ಎಂಬುದು ತನಿಖೆ ವೇಳೆ ತಿಳಿದು ಬಂದಿರುವುದಾಗಿ ಅಥಣಿ ಡಿವೈಎಸ್ಪಿ ಎಸ್. ವಿ. ಗಿರೀಶ್ 'ಈಟಿವಿ ಭಾರತ'ಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
ಒಟ್ಟಾರೆ ತಾಲೂಕಿನ ರೈತರ ನಿದ್ದೆಗಡೆಸಿದ್ದ ಜಾನುವಾರು ಕಳ್ಳರನ್ನು ಅಥಣಿ ಪೊಲೀಸರು ಬಂಧಿಸಿದ್ದು, ರೈತರು ನಿಟ್ಟುಸಿರು ಬಿಡುವಂತಾಗಿದೆ.