ಬೆಳಗಾವಿ: ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಕ್ಕೆೇ ಸಿಗುತ್ತದೆ ಎಂದು ಗದಗ ತೋಂಟದಾರ್ಯ ಸಂಸ್ಥಾನ ಮಠದ ಡಾ. ಸಿದ್ಧರಾಮ ಸ್ವಾಮೀಜಿ(Dr. Siddarama Swamiji) ವಿಶ್ವಾಸ ವ್ಯಕ್ತಪಡಿಸಿದರು.
ನಗರದ ವಿಶ್ವಗುರು ಕಾಂಪ್ಲೆಕ್ಸ್‌ಗೆ ಬೆಂಗಳೂರಿನಿಂದ ಸ್ಥಳಾಂತರಗೊಂಡಿರುವ ಜಾಗತಿಕ ಲಿಂಗಾಯತ ಮಹಾಸಭಾದ(Lingayat mahasabha) ರಾಷ್ಟ್ರೀಯ ಕೇಂದ್ರದ ನೂತನ ಕಚೇರಿಯ ಪ್ರಾರಂಭೋತ್ಸವ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗುವ ಕುರಿತಂತೆ ಶ್ರೀ ತೋಂಟದ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿರುವುದು.. ನಮ್ಮ ಮನವಿಗೆ ಕೇಂದ್ರ ಸರ್ಕಾರ ಕೂಡ ಸ್ಪಂದಿಸಬೇಕಾಗುತ್ತದೆ. ನಮ್ಮ ಬೇಡಿಕೆ ಈಡೇರುವ ನಿಟ್ಟಿನಲ್ಲಿ ರೈತರ ಹೋರಾಟ ಮಾದರಿಯಾಗಬೇಕು ಎಂದು ತಿಳಿಸಿದರು. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ತನ್ನ ಹಿಂದುತ್ವದ ಕಾರ್ಯಸೂಚಿಗೆ ಧಕ್ಕೆ ಆಗುತ್ತದೆಂದು ಲಿಂಗಾಯತ ಧರ್ಮಕ್ಕೆ ಮಾನ್ಯತೆ ಕೊಡಲು ಮುಂದಾಗುತ್ತಿಲ್ಲ.
ವಿವೇಚನಾಶೀಲವಾದ ಸರ್ಕಾರವಾಗಿದ್ದರೆ ಬೇಗ ಮಾನ್ಯತೆ ಕೊಡಬೇಕಿತ್ತು. ನಮ್ಮನ್ನು ಪ್ರತ್ಯೇಕ ಧರ್ಮವೆಂದು ಪರಿಗಣಿಸುವುದರಿಂದ, ದೇಶದ ಅಖಂಡತೆ ಹಾಳಾಗುವುದಿಲ್ಲ ಎಂದು ಹೇಳಿದರು.
128 ಕಾಯಕ ಮಾಡುವ ಪಂಗಡಗಳನ್ನು ಒಂದೆಡೆಗೆ ಸೇರಿಸಬೇಕು ಎನ್ನುವುದು ಜಾಗತಿಕ ಲಿಂಗಾಯತ ಮಹಾಸಭಾದ ಉದ್ದೇಶವಾಗಿದೆ. ನಾವು ಘಟಕ ಘಟಕಗಳಾದರೆ ಶಕ್ತರಾಗುವುದಿಲ್ಲ, ಒಗ್ಗಟ್ಟಾಗಬೇಕು.
ಹಿಂದೂ ಧರ್ಮದಲ್ಲಿ ಲಿಂಗಾಯತರ ಸ್ಥಾನ ಏನಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ನಮ್ಮನ್ನು ಶೂದ್ರರ ಸ್ಥಾನದಲ್ಲಿ ಇಟ್ಟಿದ್ದಾರೆ. ಹೀಗಾಗಿ, ಪ್ರತ್ಯೇಕ ಧರ್ಮವಾಗಲೇಬೇಕು ಎಂದರು.
ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಬಸವಪರ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಬೈಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿ ಸೇರಿ 30ಕ್ಕೂ ಅಧಿಕ ಮಠಗಳ ಸ್ವಾಮೀಜಿಗಳು ಹಾಗೂ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.