ಬೆಳಗಾವಿ :ಉರಿಗೌಡ ಮತ್ತು ನಂಜೇಗೌಡ ಸಿನಿಮಾ ಮಾಡಲು ಹೊರಟಿರುವವರ ಜೊತೆಗೆ ನಿರ್ಮಲಾನಂದ ಶ್ರೀಗಳು ಯಾವುದೇ ಕಾರಣಕ್ಕೂ ಮಾತುಕತೆ ನಡೆಸಬಾರದು ಇದರ ವಿರುದ್ಧ ಶ್ರೀಗಳೇ ಮುಂದಾಳತ್ವ ವಹಿಸಿ ಹೋರಾಟ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೈಮುಗಿದು ಮನವಿ ಮಾಡಿದರು. ಬೆಳಗಾವಿ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಈಗಾಗಲೇ ಶ್ರೀ ನಿರ್ಮಲಾನಂದ ಸ್ವಾಮೀಜಿಯವರಿಗೆ ಈ ಹೋರಾಟದ ನಾಯಕತ್ವವನ್ನು ನೀವೇ ವಹಿಸಬೇಕು. ನಮ್ಮ ಸಮಾಜದ ಧರ್ಮ ಕಾಪಾಡುವ ಕೆಲಸ ಮಾಡಬೇಕು ಎಂದು ಹೇಳಿದೀನಿ ಎಂದರು.
ಬಿಜೆಪಿಯವರು ಯಾವ ಸಿನಿಮಾವಾದರೂ ಮಾಡಲಿ, ಸಚಿವ ಅಶ್ವತ್ಥನಾರಾಯಣ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಕಥೆ ಬರೆಯಲಿ, ಶೋಭಕ್ಕ ಡೈರೆಕ್ಷನ್ ಮಾಡಲಿ, ಮುನಿರತ್ನ ಪ್ರೊಡಕ್ಷನ್ ಮಾಡಲಿ, ಇಂತಹ ನೂರು ಚಿತ್ರ ಮಾಡಿದರೂ ಹೆದರಲ್ಲ ಎಂದು ಡಿ ಕೆ ಶಿವಕುಮಾರ್ ಅವರು ಬಿಜೆಪಿ ನಾಯಕರಿಗೆ ಖಡಕ್ ಎಚ್ಚರಿಕೆ ಕೊಟ್ಟರು. ಇತಿಹಾಸವನ್ನು ಯಾವುದೇ ಕಾರಣಕ್ಕೂ ತಿರುಚಲು ಸಾಧ್ಯವಿಲ್ಲ. ಈ ರಾಜ್ಯದ ಅನೇಕರ ಇತಿಹಾಸ ತಿದ್ದಲು ಬಿಜೆಪಿ ಹೊರಟಿದ್ದು, ಬಿಜೆಪಿಯವರು ಕಾಲ್ಪನಿಕ ಕಥೆಯನ್ನ ಸೃಸ್ಟಿ ಮಾಡುತ್ತಿದ್ದಾರೆ. ಹೀಗಿರುವಾಗ ನಿರ್ಮಲಾನಂದ ಶ್ರೀಗಳು ಕರೆದು ಸಂಧಾನ ಮಾಡುವುದಾಗಲಿ ಅಥವಾ ತಿಳುವಳಿಕೆ ಹೇಳುವುದಾಗಲಿ ಮಾಡದೆ ಬಿಜೆಪಿ ವಿರುದ್ಧ ಹೋರಾಟದ ಹೆಜ್ಜೆ ಇಟ್ಟು ಈ ಸಮಾಜವನ್ನು ಉಳಿಸಬೇಕು. ಯಾರು ಇತಿಹಾಸವನ್ನು ಬದಲಾವಣೆ ಮಾಡಲು ಆಗಲ್ಲ. ಸಮಾಜಕ್ಕೆ ಶಾಂತಿ ನೆಲೆಸಲು ಮುಂದಾಳತ್ವವನ್ನು ವಹಿಸಿದ್ದೇನೆ ಎಂದು ಸ್ವಾಮೀಜಿ ಸಂದೇಶ ಕೊಡಬೇಕು ಎಂದು ಡಿ ಕೆ ಶಿವಕುಮಾರ್ ಅವರು ಮನವಿ ಸಲ್ಲಿಸಿದರು.