ಬೆಳಗಾವಿ : ಕಿತ್ತೂರು ಉತ್ಸವದ ಹಿನ್ನೆಲೆಯಲ್ಲಿ ವೇದಿಕೆ ನಿರ್ಮಾಣ, ಕೆರೆ, ಕುಸ್ತಿ ಕಣ, ಮಾಧ್ಯಮ ಕೇಂದ್ರ, ವಸ್ತು ಪ್ರದರ್ಶನ ಮಳಿಗೆ, ಆಹಾರ ಮಳಿಗೆ, ಕೋಟೆ ಆವರಣ ಸ್ವಚ್ಛತೆ, ಪಾರ್ಕಿಂಗ್, ಬಂದೋಬಸ್ತ್ ಸೇರಿದಂತೆ ವಿವಿಧ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್ ಪರಿಶೀಲಿಸಿದ್ದು, ಅಧಿಕಾರಿಗಳಿಗೆ ಕೆಲವು ಸೂಚನೆಗಳನ್ನು ನೀಡಿದ್ದಾರೆ.
ಚ.ಕಿತ್ತೂರಿನ ಕೋಟೆ ಆವರಣದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಈ ಬಾರಿಯೂ ಕೂಡ ಕಿತ್ತೂರು ಉತ್ಸವವನ್ನು ಅತ್ಯಂತ ವಿಜೃಂಭಣೆ ಮತ್ತು ಅಚ್ಚುಕಟ್ಟಾಗಿ ಆಚರಿಸಲಾಗುವುದು. ಉತ್ಸವದ ಸಿದ್ಧತೆಗಳು ಭರದಿಂದ ನಡೆದಿವೆ. ಕಡಿಮೆ ಕಾಲಾವಕಾಶ ಇರುವುದರಿಂದ ಪ್ರತಿಯೊಂದನ್ನೂ ಖುದ್ಧಾಗಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸಲಹೆ-ಸೂಚನೆಗಳನ್ನು ನೀಡಲಾಗುತ್ತಿದೆ.
ಉತ್ಸವದ ಮೊದಲ ದಿನ ಮೆರವಣಿಗೆ ಮುಕ್ತಾಯದ ವೇಳೆ ಮಧ್ಯಾಹ್ನ ನಿಚ್ಚಣಿಕೆ ಮಠದ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗುವುದು. ಉಳಿದ ದಿನಗಳಲ್ಲೂ ರಾತ್ರಿ ಊಟದ ವ್ಯವಸ್ಥೆ ಮಾಡಲಾಗುವುದು. ಅದೇ ರೀತಿ ಕಲಾವಿದರ ತಂಡಗಳಿಗೂ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರಿಗೆ ಕಾರ್ಯಕ್ರಮ ವೀಕ್ಷಣೆಗೆ ಅನುಕೂಲವಾಗುವಂತೆ ಎಲ್ಇಡಿ ಪರದೆಗಳು, ಆಸನಗಳು, ಕುಡಿಯುವ ನೀರು ಹಾಗೂ ಶೌಚಾಲಯ ಮತ್ತಿತರ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸಂಚಿತ್ ಹೆಗಡೆ-ಶಮಿತಾ ಮಲ್ನಾಡ್ ಅವರಿಂದ ಕಾರ್ಯಕ್ರಮ:ಉತ್ಸವದ ಮೊದಲ ದಿನವಾದ ಅ.23ರಂದು ಪ್ರಸಿದ್ಧ ಗಾಯಕರಾದ ಸಂಚಿತ್ ಹೆಗಡೆ ಅವರು ಕಾರ್ಯಕ್ರಮ ನೀಡುವರು. ಅದೇ ರೀತಿ ಉತ್ಸವದ ಎರಡನೇ ದಿನವಾದ ಅ.24 ರಂದು ಮಹಿಳೆಯರಿಗಾಗಿ ಕಾರ್ಯಕ್ರಮಗಳನ್ನು ಮೀಸಲಿಡಲಾಗಿದ್ದು, ಅಂದು ಗಾಯಕಿ ಶಮಿತಾ ಮಲ್ನಾಡ ಕಾರ್ಯಕ್ರಮ ನೀಡಲಿದ್ದಾರೆ. ಇನ್ನು ಮೂರನೇ ದಿನದ ಕಾರ್ಯಕ್ರಮಗಳನ್ನು ಅಂತಿಮಗೊಳಿಸಲಾಗುವುದು.