ಬೆಳಗಾವಿ:ರಾಜ್ಯಾದ್ಯಂತ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕುಟುಂಬ ಸಮೇತರಾಗಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಬೆಳಗಾವಿಯ ವಿಜಯನಗರದ ಮರಾಠಿ ಶಾಲೆಯ ಮತಗಟ್ಟೆಯಲ್ಲಿ ಸಹೋದರ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ, ಪುತ್ರ ಮೃಣಾಲ್, ಸೊಸೆ ಹಿತಾ, ತಾಯಿ ಸೇರಿ ಇನ್ನಿತರ ಕುಟುಂಬಸ್ಥರ ಜೊತೆಗೆ ಬಂದ ಹೆಬ್ಬಾಳ್ಕರ್ ಹಕ್ಕು ಚಲಾಯಿಸಿದರು.
ಮತದಾನ ಮಾಡಿದ ಬಳಿಕ ಈಟಿವಿ ಭಾರತ ಜೊತೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, "ಕಳೆದ ಬಾರಿ ನನಗೆ ಅನುಭವ ಇರಲಿಲ್ಲ. ಯಾವ ರೀತಿ ಸರ್ಕಾರದಿಂದ ಕೆಲಸ ತರಬೇಕು ಎಂಬುದು ಗೊತ್ತಿರಲಿಲ್ಲ. ಐದು ವರ್ಷ ಸತತವಾಗಿ ಜನರ ಸಂಪರ್ಕದಲ್ಲಿದ್ದೇನೆ. ಕೆಲಸ ಮಾಡಿದ್ದೇನೆ, ಹೀಗಾಗಿ ನನಗೆ ವಿಶ್ವಾಸ ಹೆಚ್ಚಾಗಿದೆ. ಕಳೆದ ಬಾರಿಗಿಂತ ಒಂದು ಸಾವಿರ ಜಾಸ್ತಿ ಅಂತರದಿಂದ ಗೆಲ್ಲುತ್ತೇನೆ. ಗೆದ್ದು ಮಂತ್ರಿಯೂ ಆಗುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಭಯ ಪಾಟೀಲ ವೋಟಿಂಗ್:ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ ತಮ್ಮ ಪತ್ನಿ ಪ್ರೀತಿ ಪಾಟೀಲ ಜೊತೆಗೆ ಆಗಮಿಸಿ ಹೊಸೂರು-ಬಸವಣ್ಣಗಲ್ಲಿಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪಾಟೀಲ್, "ಯಾರೋ ಸಾರಾಯಿ ಹಂಚಿದರೆ ಅದನ್ನು ಬಿಜೆಪಿಯವರು ಹಂಚುತ್ತಿದ್ದಾರೆ ಅಂತ ಹೇಳ್ತಿದ್ದಾರೆ. ಯಾರು ಹತಾಶರಾಗಿದ್ದಾರೆ ಅಂತ ಎಲ್ಲರಿಗೂ ಗೊತ್ತಿದೆ. ಅಮಿತ್ ಶಾ ಅವರು ಬಂದಾಗ ಭರ್ಜರಿ ರೋಡ್ ಶೋ ಮಾಡಿದ್ದೆವು. ದೇಶದಲ್ಲಿ ಎಲ್ಲೂ ಆಗದ ರೀತಿ, ಅಷ್ಟು ಅದ್ಭುತವಾಗಿ ಬೈಕ್ ರ‍್ಯಾಲಿ ಆಗಿದೆ. ಕಾಂಗ್ರೆಸ್ ಹಾಗೂ ಎಂಇಎಸ್ನವರು ಸೇರಿ ನನ್ನನ್ನು ಸೋಲಿಸಬೇಕು ಎಂದು ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್ ಅಸ್ವಿತ್ವವನ್ನೇ ಕಳೆದುಕೊಂಡಿದೆ. ಲಕ್ಷಾಂತರ ಜನ ನನ್ನ ಹಿಂದೆ ಇದ್ದಾರೆ. ಜನರೇ ಅವರಿಗೆ ಉತ್ತರ ನೀಡುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ಶೆಟ್ಟರ್ ಗೆಲ್ತಾರೆ'- ಮಂಗಲ ಅಂಗಡಿ:ರಾಜ್ಯದಲ್ಲಿ ಬಿಜೆಪಿ ಸರ್ಕಾರವೂ ಬರುತ್ತೆ, ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಕೂಡ ಗೆಲ್ಲುತ್ತಾರೆ ಎಂದು ಬೆಳಗಾವಿ ಸಂಸದೆ ಮಂಗಲ ಅಂಗಡಿ ಹೇಳಿಕೆ ನೀಡಿದ್ದಾರೆ. ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ 13 ಸ್ಥಾನವನ್ನು ಬಿಜೆಪಿ ಗೆಲ್ಲುತ್ತದೆ. ಇನ್ನು ಜಗದೀಶ ಶೆಟ್ಟರ್ ಅವರೂ ಸಹ ಗೆಲ್ಲುತ್ತಾರೆ. ಅಲ್ಲಿ ಅವರು ಮೊದಲಿಂದಲೂ ಸಹ ಕೆಲಸ ಮಾಡುತ್ತಿದ್ದಾರೆ ಎಂದರು.