ಬೆಳಗಾವಿ: ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಮದುವೆ ಸಮಾರಂಭ, ಸಲೂನ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾದಿದ್ದ ಕೊರೊನಾ ಸೋಂಕಿತನ ವಿರುದ್ಧ ಗೋಕಾಕ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹೋಮ್ ಕ್ವಾರಂಟೈನ್ ಉಲ್ಲಂಘಿಸಿ ಊರೆಲ್ಲಾ ಸುತ್ತಾಟ: ಕೊರೊನಾ ಸೋಂಕಿತನ ವಿರುದ್ಧ ಎಫ್ಐಆರ್
ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ ಆರೋಪದಡಿ ಜಿಲ್ಲೆಯಲ್ಲಿ ಈವರೆಗೆ 23 ಪ್ರಕರಣ ದಾಖಲಿಸಲಾಗಿದೆ. ಚಿಕ್ಕೋಡಿ, ಸಂಕೇಶ್ವರ, ಗೋಕಾಕ್, ಹುಕ್ಕೇರಿ, ಅಥಣಿ ಹಾಗೂ ಹಿರೇಬಾಗೇವಾಡಿಯ 23 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಜಿಲ್ಲೆಯ ಗೋಕಾಕ್ ತಾಲೂಕಿನ ಶಿಲ್ತಿಭಾವಿ ಗ್ರಾಮದ 30 ವರ್ಷದ ಯುವಕ ಇತ್ತೀಚೆಗಷ್ಟೇ ನವದೆಹಲಿಯಿಂದ ಊರಿಗೆ ಬಂದಿದ್ದ. ನಂತರ ಈತನನ್ನು ಸಾಂಸ್ಥಿಕ ಕ್ವಾರಂಟೈನ್ ಬಳಿಕ ಹೋಮ್ ಕ್ವಾರಂಟೈನ್‌ಗೆ ಸೂಚಿಸಲಾಗಿತ್ತು. ವರದಿ ಬರುವ ಮುನ್ನವೇ ಯುವಕನನ್ನು ಬಿಡುಗಡೆ ಮಾಡಿದಕ್ಕೆ ಮೇ 29ರಿಂದ ಹೋಂ ಕ್ವಾರಂಟೈನ್‌ನಲ್ಲಿಡಲಾಗಿತ್ತು. ಈ ವೇಳೆ ಮನೆಯಲ್ಲಿರದ ಯುವಕ, ಸ್ನೇಹಿತರ ಮದುವೆ ಸಮಾರಂಭ, ಸಲೂನ್ ಶಾಪ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡಿದ್ದಾನೆ.
ಇದಾದ ಬಳಿಕ ಜೂನ್ 2ರಂದು ಯುವಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ರೋಗ ಹರಡುವಿಕೆಗೆ ಕಾರಣನಾದ ಹಿನ್ನೆಲೆ ಗೋಕಾಕ್ ಗ್ರಾಮೀಣ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
23 ಜನರ ವಿರುದ್ಧ ಎಫ್ಐಆರ್: ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ, ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ ಆರೋಪದಡಿ ಜಿಲ್ಲೆಯಲ್ಲಿ ಈವರೆಗೆ 23 ಪ್ರಕರಣ ದಾಖಲಿಸಲಾಗಿದೆ. ಚಿಕ್ಕೋಡಿ, ಸಂಕೇಶ್ವರ, ಗೋಕಾಕ್, ಹುಕ್ಕೇರಿ, ಅಥಣಿ ಹಾಗೂ ಹಿರೇಬಾಗೇವಾಡಿಯ 23 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೋಮ್ ಕ್ವಾರಂಟೈನ್ ನಿಯಮ ಪಾಲಿಸುವ ಜೊತೆಗೆ ಕೊರೊನಾ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.