ಬೆಳಗಾವಿ: ವಾಯವ್ಯ ಪದವೀಧರ ಹಾಗೂ ಶಿಕ್ಷಕ ಕ್ಷೇತ್ರದ ಪರಿಷತ್ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಚುನಾವಣೆ ಹೊಸ್ತಿಲಲ್ಲಿ ಬೆಳಗಾವಿ ಬಿಜೆಪಿ ನಾಯಕರ ಭಿನ್ನರಾಗ ಅಭ್ಯರ್ಥಿಗಳ ಎದೆಬಡಿತ ಹೆಚ್ಚಾಗಲು ಕಾರಣವಾಗಿದೆ.
ಬೆಳಗಾವಿ, ವಿಜಯಪುರ, ಬಾಗಲಕೋಟೆ ಕ್ಷೇತ್ರ ವ್ಯಾಪ್ತಿಯನ್ನು ಹೊಂದಿರುವ ವಾಯವ್ಯ ಪದವೀಧರ ಹಾಗೂ ವಾಯವ್ಯ ಶಿಕ್ಷಕ ಕ್ಷೇತ್ರಗಳಿಗೆ ಬೆಳಗಾವಿ ಮತದಾರರೇ ನಿರ್ಣಾಯಕರು. ಚುನಾವಣೆ ಅಖಾಡಕ್ಕೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಗಿರುವ ಪರಿಷತ್ ಸದಸ್ಯ ರವಿಕುಮಾರ್ ಧುಮಕಿದ್ದಾರೆ. ನಿನ್ನೆಯಷ್ಟೇ ಬೆಳಗಾವಿಯ ಸಂಕಂ ಹೋಟೆಲ್ನಲ್ಲಿ ಜನಪ್ರತಿನಿಧಿಗಳು ಹಾಗೂ ಪ್ರಮುಖರ ಸಭೆ ಕರೆಯಲಾಗಿತ್ತು. ಜಿಲ್ಲೆಯ 13 ಹಾಲಿ ಶಾಸಕರು ಹಾಗೂ ಸಂಸದರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಸಭೆಗೆ 13 ಶಾಸಕರ ಪೈಕಿ 9 ಶಾಸಕರು ಗೈರಾಗಿದ್ದು, ಶಿಕ್ಷಕ ಕ್ಷೇತ್ರದ ಅಭ್ಯರ್ಥಿ ಅರುಣ್ ಶಹಾಪುರ ಹಾಗೂ ಪದವೀಧರ ಕ್ಷೇತ್ರದ ಅಭ್ಯರ್ಥಿ ಹನುಮಂತ ನಿರಾಣಿಗೆ ಆತಂಕ ಶುರುವಾಗಿದೆ.
ಬಿಜೆಪಿ ಹೈಕಮಾಂಡ್‍ಗೂ ತಲೆನೋವು: ಬೆಳಗಾವಿ ಬಿಜೆಪಿ ನಾಯಕರ ಭಿನ್ನರಾಗ ಬಿಜೆಪಿ ಹೈಕಮಾಂಡ್‍ಗೂ ತಲೆನೋವಾಗಿ ಪರಿಣಮಿಸಿದೆ. ಜಿಲ್ಲೆಯ ನಾಯಕರನ್ನು ಒಗ್ಗೂಡಿಸಲು ಸ್ವತಃ ಮಾಜಿ ಸಿಎಂ ಬಿಎಸ್‍ವೈ ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‍ಸಿಂಗ್ ಬೆಳಗಾವಿಗೆ ಬಂದು ಹೋದರೂ ಪರಿಸ್ಥಿತಿ ಸುಧಾರಿಸಿಲ್ಲ. ಕಳೆದ ಪರಿಷತ್ ಚುನಾವಣೆಯಲ್ಲಿ ಜಿಲ್ಲೆಯ ನಾಯಕರ ಮಧ್ಯದ ವೈಮನಸ್ಸು ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಸೋಲಿಗೆ ಕಾರಣವಾಗಿತ್ತು. ಜಿಲ್ಲೆಯಲ್ಲಿ ಇಬ್ಬರು ಸಚಿವರು, ಮೂವರು ಸಂಸದರು, 13 ಶಾಸಕರಿದ್ದರೂ ಬಿಜೆಪಿ ಅಭ್ಯರ್ಥಿ ಸೋಲು ನಾಯಕರಲ್ಲಿ ಆಘಾತ ಮೂಡಿಸಿತ್ತು.
ಆದರೂ, ಸೋಲಿಗೆ ಕಾರಣವನ್ನು ಬಿಜೆಪಿ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಪರಾಮರ್ಶೆ ಮಾಡಿದರೆ ಹೊರತು, ಭಿನ್ನಮತೀಯ ನಾಯಕರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲಿಲ್ಲ. ಇನ್ನಾದರೂ ಬಿಜೆಪಿ ನಾಯಕರನ್ನು ಒಗ್ಗೂಡಿಸದಿದ್ದರೆ ವಾಯವ್ಯ ಪದವೀಧರ ಹಾಗೂ ಶಿಕ್ಷಕ ಕ್ಷೇತ್ರದ ಚುನಾವಣೆ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ಚುನಾವಣೆ ಮುನ್ನವೇ ಬಿಜೆಪಿ ನಾಯಕರು ಬೆಳಗಾವಿಗೆ ಭೇಟಿ ನೀಡಿ, ನಾಯಕರಲ್ಲಿ ಸಮನ್ವಯತೆ ಸಾಧಿಸಬೇಕಿದೆ. ಇಲ್ಲವಾದರೆ ಬಿಜೆಪಿ ಅಭ್ಯರ್ಥಿಗಳಿಗೆ ಸೋಲು ತಪ್ಪಿದ್ದಲ್ಲ.