ಬೆಳಗಾವಿ: ನಗರದ ಎಸ್ಪಿ ಕಚೇರಿ ಎದುರಿರುವ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಿದ್ದ 'ಇಆರ್ ಎಸ್‍ಎಸ್' 112 ಕ್ರಿಕೆಟ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಬೆಳಗಾವಿ ಇನ್ ಕೇಬಲ್ ತಂಡ ಭರ್ಜರಿ ಜಯ ಗಳಿಸಿತು. ರನ್ನರ ಅಪ್ ಆಗಿ ಮಹಾನಗರ ಪೊಲೀಸ್ ತಂಡ ಹೊರಹೊಮ್ಮಿತು.
ನಗರ ಪೊಲೀಸ್ ಮೈದಾನಲ್ಲಿ ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ತಮ್ಮ ದೈನಂದಿನ ಕೆಲಸದ ಒತ್ತಡಗಳನ್ನು ಬದಿಗಿಟ್ಟು ಪೊಲೀಸರು, ವೈದ್ಯರು, ಪತ್ರಕರ್ತರು, ವಕೀಲರು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗಿಯಾಗಿ ಸಖತ್ ಎಂಜಾಯ್ ಮಾಡಿದರು. ಇನ್ನು ಪ್ರಥಮ ಸ್ಥಾನ ಪಡೆದ ರಾಜಶೇಖರ್ ಪಾಟೀಲ್ ನೇತೃತ್ವದ ಇನ್ ಕೇಬಲ್ ತಂಡಕ್ಕೆ ಹಾಗೂ ರನ್ನರ್ ಅಪ್ ಪ್ರಶಸ್ತಿ ಪಡೆದ ಮಹಾನಗರ ಪೊಲೀಸ್ ಆಯುಕ್ತ ಡಾ.ಕೆ. ತ್ಯಾಗರಾಜನ್ ನೇತೃತ್ವದ ನಗರ ಪೊಲೀಸ್ ತಂಡಕ್ಕೆ ಎಸ್‍ಪಿ ಲಕ್ಷ್ಮಣ ನಿಂಬರಗಿ, ಐಜಿಪಿ ರಾಘವೇಂದ್ರ ಸುಹಾಸ್ ಇಆರ್ ಎಸ್‍ಎಸ್-112 ಟ್ರೋಫಿ ನೀಡಿ ಗೌರವಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನಗರ ಪೊಲೀಸ್ ತಂಡ 10 ಓವರ್ಗಳಲ್ಲಿ 95 ರನ್ ಗಳಿಸಿತ್ತು. 10 ಓವರ್ ಗಳಲ್ಲಿ 100 ರನ್ ಗಳನ್ನು ಬೆನ್ನಟ್ಟಿದ ಇನ್ ನ್ಯೂಸ್ / ಇನ್ ಕೇಬಲ್ ತಂಡ ಪ್ರಾರಂಭದಲ್ಲಿ ರನ್ ಗಳಿಸಲು ಹರಸಾಹಸಪಟ್ಟಿತು. 5 ಓವರ್ಗಳಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಸೋಲುವ ಭೀತಿಯಲ್ಲಿತ್ತು. ಆದ್ರೆ, ನಂತರ ಬಂದ ಆಲ್ರೌಂಡರ್ ಆಟಗಾರ ಅಭಿಷೇಕ ನಗರ ಪೊಲೀಸ್ ತಂಡದ ಬೌಲರ್ಗಳ ಬೆವರಿಳಿಸಿದರು. ಕೊನೆಯ ಓವರ್ನಲ್ಲಿ ಇನ್ ಕೇಬಲ್ ತಂಡಕ್ಕೆ ಗೆಲ್ಲಲು 8 ರನ್‌ಗಳು ಬೇಕಾಗಿದ್ದವು. ಈ ವೇಳೆ, ಅಭಿಷೇಕ ಮೊದಲೆರಡು ಬಾಲ್ಗಳಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಜಯದ ಮಾಲೆಯನ್ನು ಕೊರಳಿಗೆ ಹಾಕಿಕೊಂಡರು. ಬೆಸ್ಟ್ ಬ್ಯಾಟ್ಸ್ಮನ್ ಜಗದೀಶ ಲಮಾಣಿ, ಬೆಸ್ಟ್ ಬೌಲರ್ ಹನುಮಂತ ಬೆಂಚಣ್ಣವರ ಅವರಿಗೆ ಪ್ರಮಾಣ ಪತ್ರ, ಪ್ರಶಸ್ತಿ ವಿತರಿಸಲಾಯಿತು.