ಬೆಳಗಾವಿ : ನಾನೇನು ತಪ್ಪು ಹೇಳಿಲ್ಲ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದು, ಕ್ಷಮೆ ಕೋರಲು ನಿರಾಕರಿಸಿದ್ದಾರೆ. ಸುವರ್ಣಸೌಧದಲ್ಲಿ ಮಾತನಾಡಿದ ಅವರು, ನನ್ನ ಹೇಳಿಕೆಗೆ ನಾನು ಬದ್ದ. ಸದನ 4 ನೇ ತಾರೀಖಿನಿಂದ ಶುರುವಾಗಿದೆ. ಮೊದಲ ವಾರ ಏನೂ ಮಾತಾಡಿಲ್ಲ. ಎರಡನೇ ವಾರ ಸೋಮವಾರ ಇವತ್ತು ತೆಗೆದುಕೊಂಡಿದ್ದಾರೆ. ಇದ್ದಕ್ಕಿದ್ದ ಹಾಗೆ ಈ ವಿಷಯ ಎತ್ತಿಕೊಳ್ಳುವ ಅಗತ್ಯವಾದರೂ ಏನಿತ್ತು?. ನಾನು ಏನು ತಪ್ಪು ಮಾತಾಡಿದ್ದೇನೆ?. ಹೈದರಾಬಾದ್ ಸಭೆಯಲ್ಲಿ ಮಾತಾಡಿದ್ದೇನೆ. ಸಭೆಯಲ್ಲಿ ಯಾರೋ ಒಬ್ಬ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾನ ಅವಕಾಶ ಕೊಡಲ್ಲ ಎಂದು ಹೇಳಿದ್ದರು. ಆಗ ನಿನ್ನ ಭಾವನೆ ತಪ್ಪು ಇದೆ, ಕರ್ನಾಟಕದಲ್ಲಿ 17 ಜನರಿಗೆ ಟಿಕೆಟ್ ಕೊಟ್ಟಿದ್ದಾರೆ. ಅದರಲ್ಲಿ ಒಂಬತ್ತು ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ. 9ರಲ್ಲಿ ಐದು ಜನರಿಗೆ ಅಧಿಕಾರ ಕೊಟ್ಟಿದ್ದಾರೆ ಎಂದು ಹೇಳಿದ್ದೆ ಅಂತಾ ಆ ಸಭೆಯಲ್ಲಿ ಮಾತನಾಡಿದ್ದನ್ನು ಜಮೀರ್ ಅಹಮ್ಮದ್ ಖಾನ್ ವಿವರಿಸಿದರು.
ಪೀಠಕ್ಕೆ ಎಲ್ಲರೂ ನಮಸ್ಕಾರ ಮಾಡಲೇಬೇಕು ತಾನೇ: ನನ್ನನ್ನು, ರಹೀಮ್ ಖಾನ್ ಅವರನ್ನು ಮಂತ್ರಿ ಮಾಡಿದ್ದಾರೆ. ಸಲೀಂ ಅಹ್ಮದ್ ಅವರನ್ನ ಚೀಫ್ ವಿಪ್ ಮಾಡಿದ್ದಾರೆ. ನಜೀರ್ ಅಹ್ಮದ್ ಅವರನ್ನ ಸಿಎಂ ರಾಜಕೀಯ ಕಾರ್ಯದರ್ಶಿ ಆಗಿ ಮಾಡಿದ್ದಾರೆ. ಕರ್ನಾಟಕದಲ್ಲಿ ಯು ಟಿ ಖಾದರ್ ಅವರನ್ನು ಸ್ಪೀಕರ್ ಮಾಡಿದ್ದಾರೆ. ಸ್ಪೀಕರ್ ಅವರಿಗೆ ನನ್ನನ್ನು ಸೇರಿದಂತೆ ಬಿಜೆಪಿ ಅವರು ನಮಸ್ಕಾರ ಮಾಡಬೇಕು ಎಂದು ಹೇಳಿದ್ದೇನೆ. ಇದು ಹೇಗೆ ಅಪಮಾನ ಆಗುತ್ತೆ. ಪೀಠಕ್ಕೆ ಎಲ್ಲರೂ ನಮಸ್ಕಾರ ಮಾಡಲೇಬೇಕು ತಾನೇ. ಕಾಂಗ್ರೆಸ್ ಪಕ್ಷ ಸ್ಪೀಕರ್ ಸ್ಥಾನ ಕೊಟ್ಟಿದೆ. ಯಾರೇ ಇದ್ದರೂ ಪೀಠಕ್ಕೆ ನಮಸ್ಕಾರ ಮಾಡಲೇಬೇಕಲ್ಲವೇ ಎಂದು ಮರು ಪ್ರಶ್ನಿಸಿದರು.