ಅಥಣಿ (ಬೆಳಗಾವಿ): ರಾಜ್ಯ ಸರ್ಕಾರದ ಭೂಸುಧಾರಣೆ ಕಾಯ್ದೆಯ ತಿದ್ದುಪಡಿ ವಿರೋಧಿಸಿ ಅಥಣಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಕರ್ನಾಟಕ ಸರ್ಕಾರದ ಭೂ ಸುಧಾರಣಾ ಕಾಯ್ದೆ 1961ರ ಕಲಂ 63,79 ಎ,ಬಿ,ಸಿ ಮತ್ತು 80ನೇ ಕಲಂ ತಿದ್ದುಪಡಿ ವಿರೋಧಿಸಿ, ಸಾಮೂಹಿಕ ನಾಯಕತ್ವದಲ್ಲಿ ಪಟ್ಟಣದಲ್ಲಿ ನೂರಾರು ರೈತರು ಸೇರಿ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟಿಸಿದರು.
ಭೂ ಸುಧಾರಣೆ ಕಾಯ್ದೆ ರೈತರಿಗೆ ಉರುಳಾಗಲಿದೆ ಎಂದು ಅಣುಕು ನೇಣು ಕುಣಿಕೆಯ ಪ್ರದರ್ಶನ ಮಾಡಿ ರೈತರು ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದಂತೆ, ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಥಣಿಯ ಉಪತಹಶೀಲ್ದಾರ್ ರಾಜು ಬರ್ಲಿ ರೈತರ ಮನವಿ ಆಲಿಸಿದರು.
ನಂತರ ರೈತರು ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸರ್ಕಾರ ಕೈಬಿಡಬೇಕು ಎಂದು ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು. ಇದೆ ವೇಳೆ ಮಾತನಾಡಿದ ರೈತ ಮುಖಂಡ ಪ್ರಕಾಶ್ ಪೋಜೇರಿ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿದೆ, ರೈತ ಜಮೀನುಗಳನ್ನು ರೈತರೆ ಕೊಳ್ಳುವ ನಿಯಮಗಳನ್ನೂ ಸರ್ಕಾರ ತಿದ್ದುಪಡೆ ಮಾಡುತ್ತಿರುವುದು ರೈತರಿಗೆ ನೇಣು ಕುಣಿಕೆಯಾಗಿ ಪರಿಣಮಿಸುತ್ತದೆ ಎಂದರು.
ಮುಖ್ಯಮಂತ್ರಿಗಳು ರೈತರನ್ನು ಕೊಲ್ಲುವ ಕೆಲಸ ಮಾಡಬಾರದು. ಸುಗ್ರೀವಾಜ್ಞೆ ಮುಖಾಂತರ ಕಾಯ್ದೆ ತಿದ್ದುಪಡಿ ತರುವುದು ಖಂಡನೀಯ, ಭೂಸ್ವಾಧೀನ ಕಾನೂನು ತಿದ್ದುಪಡಿ ತರದೇ ಹೋದರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇನ್ನೋರ್ವ ರೈತ ಮುಖಂಡ ಎಂ.ಸಿ ತಾಂಬೋಳಿ ಮಾತನಾಡಿ ರಾಜ್ಯ ಸರ್ಕಾರ ದ್ವಂದ್ವ ನಿಲುವನ್ನು ಹಿಂಪಡೆಯಬೇಕು, ಯಥಾಪ್ರಕಾರ ಹಳೆಯ ಕಾಯ್ದೆಯನ್ನು ಮುಂದುವರಿಸಬೇಕು. ಕಾರ್ಪೊರೇಟರ್ ಮತ್ತು ಇಂಡಸ್ಟ್ರಿಯಲ್ಗಳನ್ನು ಬೆಳೆಸಲು ಈ ಕಾಯ್ದೆಗಳನ್ನು ಜಾರಿಗೆ ಮಾಡಿದ್ದಾರೆ, ರೈತರನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ, ಆಹಾರ ಭದ್ರತೆ ನೀಡುವ ರೈತರಿಗೆ ಅನ್ಯಾಯವಾಗುತ್ತಿದೆ ಎಂದರು. ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಹಿಂಪಡೆಯದೇ ಇದ್ದರೆ ಪ್ರತಿ ಗ್ರಾಮಗಳಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜನಪ್ರತಿನಿಧಿಗಳಿಗೆ ಮಾದರಿಯಾದ ರೈತರು:ಪಟ್ಟಣದಲ್ಲಿ ಭೂಸುಧಾರಣೆ ಕಾಯ್ದೆ ತಿದ್ದುಪಡಿಗೆ ವಿರೋಧಿಸಿ ಪ್ರತಿಭಟನೆಯಲ್ಲಿ ರೈತರು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು, ಶಿಸ್ತುಬದ್ಧರಾಗಿ ಪ್ರತಿಭಟನೆ ನಡಸಿ ಜನಪ್ರತಿನಿಧಿಗಳಿಗೂ ಮಾದರಿಯಾಗಿದ್ದಾರೆ.