ಹಿರೇಕೋಡಿ ನಂದಿಪರ್ವತ ಜೈನ ಆಶ್ರಮದಿಂದ ಜೈನ ಮುನಿ ನಾಪತ್ತೆ ಚಿಕ್ಕೋಡಿ(ಬೆಳಗಾವಿ): ನಗರದ ಜೈನ ಬಸದಿಯಲ್ಲಿ ಇದ್ದಕ್ಕಿದ್ದಂತೆ ಜೈನಮನಿ ನಾಪತ್ತೆಯಾಗಿದ್ದು, ಜೈನ ಶ್ರಾವಕರು ಆತಂಕ ಗೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ನಂದಿ ಪರ್ವತ ಜೈನ ಆಶ್ರಮದಿಂದ ಆಚಾರ್ಯ ಶ್ರೀ 108 ಶ್ರೀ ಕುಮಾರ್ ನಂದಿ ಮಹಾರಾಜರು ನಾಪತ್ತೆಯಾಗಿರುವ ಈ ಕುರಿತಾಗಿ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದಿನ ಗುರುವಾರ 8 ಗಂಟೆ ಆಸುಪಾಸಿನಲ್ಲಿ ಜೈನ ಮುನಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಮೊನ್ನೆ (ಬುಧವಾರ) ರಾತ್ರಿ 10 ಗಂಟೆಯವರೆಗೆ ಆಶ್ರಮದ ತಮ್ಮ ಕೋಣೆಯಲ್ಲಿ ಇದ್ದ ಸ್ವಾಮೀಜಿ, ನಿನ್ನೆ ಬೆಳಗ್ಗೆ ಭಕ್ತರು ಆಶ್ರಮಕ್ಕೆ ಆಗಮಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕಳೆದ 15 ವರ್ಷಗಳಿಂದ ನಂದಿ ಪರ್ವತದಲ್ಲಿ ಶ್ರೀ ಕುಮಾರ್ ನಂದಿ ಮಹಾರಾಜರು ವಾಸವಾಗಿದ್ದರು. ಜೈನಮುನಿಗಳು ವಾಸ ಇರುವ ಕೋಣೆಯಲ್ಲಿ ಪಿಂಚಿ, ಕಮಂಡಲು ಹಾಗೂ ಮೊಬೈಲ್ ಇಲ್ಲೆ ಬಿಟ್ಟು ಹೋಗಿದ್ದಾರೆ. ಜೈನಮುನಿಗಳು ಎಲ್ಲೇ ಹೋಗಬೇಕಿದ್ದರೂ ಪಿಂಚಿ ಕಮಂಡಲ ತಗೆದುಕೊಂಡು ಹೋಗುವ ಪ್ರತೀತ ಇದೆ. ಆದರೆ ಅವುಗಳು ಇಲ್ಲೇ ಇರುವುದರಿಂದ ಭಕ್ತರ ಆತಂಕಕ್ಕೆ ಕಾರಣವಾಗಿದೆ.
ನಿನ್ನೇ ಇಡೀ ದಿನ ನಂದಿ ಪರ್ವತ ಜೈನ ಆಶ್ರಮದ ಸುತ್ತಮುತ್ತ ಶ್ರಾವಕರು ಹುಡುಕಾಟ ನಡೆಸಿದರೂ ಮುನಿಗಳು ಸಿಗದೇ ಇದ್ದಾಗ ಇವತ್ತು ಆಶ್ರಮದ ಆಡಳಿತ ಸದಸ್ಯರಿಂದ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಕುರಿತು ಪ್ರಕರಣ ದಾಖಲು ಮಾಡಿದ್ದಾರೆ.
ಶ್ರೀಗಳು ಕಾಣಿಸದೇ ಇರುವುದು ಆತಂಕಕ್ಕೆ ಕಾರಣ: ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಭೀಮಪ್ಪ ಉಗಾರೆ ಮಾತನಾಡಿ, ನಮಗೆ ಶ್ರೀಗಳು ಕಾಣಿಸದೇ ಇರುವುದರಿಂದ ನಾವೆಲ್ಲ ಆತಂಕಗೊಂಡಿದ್ದೇವೆ. ನಾವು ನಂದಿ ಪರ್ವತ ಜೈನ ಮಂದಿರದ ಸುತ್ತಲೂ ಹುಡುಕಿದರೂ ಸಿಗುತ್ತಿಲ್ಲ, ಸ್ವಾಮೀಜಿ ಅವರು ನೇರ ಮಾತುಗಾರರು ಆಗಿದ್ದರು. ಅವರ ಹತ್ತಿರ ಯಾವುದೇ ಆಸ್ತಿ ಪಾಸ್ತಿ ಏನೂ ಇಲ್ಲ. ಅವರು ಒಬ್ಬರು ದಿಗಂಬರ ಸ್ವಾಮೀಜಿ ಆಗಿದ್ದು, ಅವರನ್ನು ದ್ವೇಷ ಮಾಡುವರು ಯಾರು ಇಲ್ಲ , ಏಕಾಏಕಿ ಅವರ ಕಾಣೆ ಆಗಿರುವುದು ನಮ್ಮೆಲ್ಲರ ಆತಂಕಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಟ್ರಸ್ಟ್ ಸದಸ್ಯ ಅನೀಲ ಉಪಾಧ್ಯೆ ಮಾತನಾಡಿ, ಶ್ರೀಗಳು ಭಕ್ತರ ಜೊತೆ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದರು, ಮೊನ್ನೆ ಚಾತುರ್ಮಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ರೀತಿ ಅಚಾನಕ್ ಆಗಿ ಘಟನೆ ಸಂಭವಿಸಿದ್ದು, ನಮ್ಮ ಆತಂಕಕ್ಕೆ ಕಾರಣವಾಗಿದೆ. ಈ ರೀತಿ ಘಟನೆ ಆಗುತ್ತಿದ್ದಂತೆ ಸ್ಥಳಕ್ಕೆ ವಿವಿಧ ಮಠಗಳಿಂದ ಭಟ್ಟಾರಕ ಸ್ವಾಮೀಜಿಗಳು ಬಂದಿದ್ದರು, ಅವರು ದೂರು ಕೊಡುವಂತೆ ಸಲಹೆ ಕೂಡ ನೀಡಿದ್ದಾರೆ ಎಂದರು.
ನಾವು ಕೂಡ ಶ್ರೀಗಳನ್ನು ಹುಡುಕಾಟ ನಡೆಸಿದರು ಎಲ್ಲೂ ಸಿಗುತ್ತಿಲ್ಲ, ಇದು ನಮ್ಮ ಆತಂಕಕ್ಕೆ ಕಾರಣವಾಗಿದೆ, ಯಾರ ಮೇಲೂ ದ್ವೇಷ ಇಲ್ಲದ ಸ್ವಾಮೀಜಿ ಈ ರೀತಿ ಕಾಣೆಯಾಗಿರುವುದು ಅಚ್ಚರಿ ಮೂಡಿಸಿದ್ದರಿಂದ ನಾವು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಶ್ರೀಗಳನ್ನು ಹುಡುಕಿ ಕೊಡುವಂತೆ ದೂರು ಸಲ್ಲಿಸಿದ್ದೇವೆ ಎಂದು ಉಪಾಧ್ಯೆ ವಿವರಣೆ ಕೊಟ್ಟಿದ್ದಾರೆ.
ಇದನ್ನೂ ಓದಿ: ನಿರೀಕ್ಷೆ ಬೆಟ್ಟದಷ್ಟು: ಬೆಳಗಾವಿ ಜಿಲ್ಲೆಗೆ ಬಜೆಟ್ನಲ್ಲಿ ಸಿಕ್ಕಿದ್ದು ಸಾಸಿವೆಯಷ್ಟು..!