ಚಿಕ್ಕೋಡಿ/ಹುಕ್ಕೇರಿ: ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹುಕ್ಕೇರಿ ಪಟ್ಟಣದ ಬಡಾವಣೆಗಳಲ್ಲಿ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ಮಳೆಯಿಂದ ತುಂಬಿದ ಚರಂಡಿ ನೀರು ನುಗ್ಗುತ್ತಿದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ.
ಚಿಕ್ಕೋಡಿ, ಹುಕ್ಕೇರಿಯಲ್ಲಿ ಧಾರಾಕಾರ ಮಳೆ: ಮನೆಯೊಳಗೆ ನುಗ್ಗಿದ ನೀರು
ಈಗಾಗಲೇ ಕೊರೊನಾ ಮಹಾಮಾರಿಯಿಂದ ತತ್ತರಿಸಿ ಹೋಗಿರುವ ಚಿಕ್ಕೋಡಿ ಜನರಿಗೆ ಮಹಾಮಳೆಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ಹುಕ್ಕೇರಿ ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಅಲ್ಲದೆ ಪಟ್ಟಣದ ಮಿನಿ ವಿಧಾನ ಸೌಧದ ಹತ್ತಿರ ಜಯನಗರದ ಬಡಾವಣೆಗಳಲ್ಲಿರುವ ಮನೆಗಳಿಗೆ ಮಳೆ ನೀರು ನುಗ್ಗಿದೆ.
ಈಗಾಗಲೇ ಕೊರೊನಾ ಮಹಾಮಾರಿಯಿಂದ ಜನರು ತತ್ತರಿಸಿದ್ದಾರೆ. ಈಗ ಈ ಮಳೆ ನೀರು ಮನೆಗಳಿಗೆ ಹಾಗೂ ನೀರಿನ ಟ್ಯಾಂಕ್ಗಳಿಗೆ ನುಗ್ಗಿದೆ. ಇದರಿಂದ ಡೆಂಗ್ಯೂ ಸೇರಿದಂತೆ ಇತರೆ ರೋಗಗಳು ಬಂದರೆ ಯಾರು ಹೊಣೆ ಎಂದು ಸ್ಥಳೀಯರಾದ ಆಶಾ ಪೋತದಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿ ಬಾರಿ ಮಳೆ ಬಂದಾಗಲೂ ಇದೇ ರೀತಿ ನೀರು ಮನೆಗಳಿಗೆ ನುಗ್ಗುತ್ತಿದೆ. ಈ ಕುರಿತು ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೂ ಸ್ಪಂದಿಸಿಲ್ಲ. ಮನೆ ಮುಂದಿರುವ ಕುಡಿಯುವ ನೀರಿನ ಟ್ಯಾಂಕ್ಗೆ ರಸ್ತೆ ಮೇಲಿಂದ ಹರಿದು ಬರುವ ನೀರು ಸೇರಿಕೊಳ್ಳುತ್ತಿದೆ. ಮಳೆಗಾಲದಲ್ಲಿ ಆರೋಗ್ಯ ಏರುಪೇರಾದರೇ ಅದಕ್ಕೆಲ್ಲಾ ಯಾರು ಹೊಣೆ? ಎಂದು ಪ್ರಶ್ನಿಸಿದರು.