ಬೆಳಗಾವಿ : ಬೇಸಿಗೆಯಲ್ಲಿ ಬೀಕರ ಬರಗಾಲದಿಂದ ತತ್ತರಿಸಿದ್ದ ಕುಂದಾನಗರಿಯ ರೈತರಿಗೆ ಈಗ ಅನಾವೃಷ್ಟಿ ಆತಂಕ ಸೃಷ್ಟಿಸಿದೆ. ಮುಂಗಾರು ನಂಬಿ ನಾಟಿ ಮಾಡಿದ್ದ ಬೆಳೆ ವರುಣನ ಪ್ರತಾಪಕ್ಕೆ ಹಾನಿಗೊಂಡಿದೆ.
ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರು ನುಗ್ಗಿದೆ. ಕೃಷಿಯನ್ನೇ ನಂಬಿರುವ ರೈತನಿಗೆ ಮಳೆರಾಯ ಆಘಾತ ನೀಡಿದ್ದು, ಜಲಾವೃತವಾದ ಕೃಷಿ ಗದ್ದೆಯನ್ನು ನೋಡಿ ರೈತ ಕಂಗಾಲಾಗಿದ್ದಾನೆ. ನಗರದ ಯಡಿಯೂರಪ್ಪ ಮಾರ್ಗ ಹಾಗೂ ಸಾಮ್ರಾ ರಸ್ತೆಯಲ್ಲಿರುವ ಸಾವಿರಾರು ಎಕರೆ ಭತ್ತದ ಗದ್ದೆಗೆ ಮಳೆನೀರು ನುಗ್ಗಿ, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ಉಗಾರ-ಕುಡಚಿ ಸೇತುವೆ ಬಂದ್ :
ಕರ್ನಾಟಕ-ಮಹಾರಾಷ್ಟ್ರ ಸಂಧಿಸುವ ಏಕೈಕ ಕೊಂಡಿ ಉಗಾರ-ಕುಡಚಿ ಮಾರ್ಗದ ಮಧ್ಯದ ಸೇತುವೆಯ ಮೇಲೆ 3 ಅಡಿ ನೀರು ಬಂದಿರುವುದರಿಂದ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಮಹಾರಾಷ್ಟ್ರದ ಮಹಾಬಳೇಶ್ವರ, ಕೊಂಕಣ ಹಾಗೂ ಸಹ್ಯಾದ್ರಿ ಶ್ರೇಣಿಯ ಘಟ್ಟ ಪ್ರದೇಶದಲ್ಲಿ ಕಳೆದ 5-6 ದಿನಗಳಿಂದ ಕುಂಭದ್ರೋಣ ಮಳೆ ಸುರಿಯುತ್ತಿದೆ. ಅಲ್ಲದೇ ಮಹಾರಾಷ್ಟ್ರದ ಕೊಯ್ನಾ ಜಲಾಶಯ ಶೇ 84 ರಷ್ಟು ಭರ್ತಿಯಾಗಿದ್ದು ಕೃಷ್ಣಾ ನದಿಗೆ ಪ್ರವಾಹ ಬಂದು ಉಗಾರ-ಕುಡಚಿ ಮಾರ್ಗದ ಸೇತುವೆಯ ಸಂಚಾರಕ್ಕೆ ತೊಂದರೆಯುಂಟಾಗಿದೆ.