ಬೆಳಗಾವಿ: ಕೇಂದ್ರ ಸರ್ಕಾರದ ಬಜೆಟ್‍ಗೆ ಇನ್ನು ಎರಡೇ ದಿನ ಬಾಕಿಯಿದ್ದು, ದೇಶದಲ್ಲಿ ಕೋವಿಡ್ ಅಟ್ಟಹಾಸ ನಿಯಂತ್ರಿಸಲು ಆರೋಗ್ಯ ಇಲಾಖೆ ಹೆಚ್ಚಿನ ಅನುದಾನ ನಿರೀಕ್ಷಿಸುತ್ತಿದೆ. ಮುಂಬರುವ ದಿನಗಳಲ್ಲಿ ಕೊರೊನಾ 2ನೇ ಅಲೆ ಹರಡುವ ಭೀತಿ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ತಜ್ಞ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಸಾಧ್ಯವಾದಷ್ಟು ವೇಗದಲ್ಲಿ ದೇಶವಾಸಿಗಳಿಗೆ ವ್ಯಾಕ್ಸಿನ್ ವಿತರಿಸಬೇಕಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇತರ ರಾಷ್ಟ್ರೀಯ ಯೋಜನೆ ಜಾರಿಗಾಗಿ ಪ್ರತೀ ವರ್ಷ ಮೀಸಲಿಡುವ ಅನುದಾನದ ಜೊತೆಗೆ ಕೋವಿಡ್ ನಿಯಂತ್ರಣಕ್ಕಾಗಿ ಇನ್ನೂ ಹೆಚ್ಚಿನ ಅನುದಾನ ಮೀಸಲಿಡಬೇಕಿದೆ.
ಇತರೆ ಹಣ ಕೋವಿಡ್ ನಿಯಂತ್ರಣಕ್ಕೆ ಬಳಕೆ:2019-20 ಹಾಗೂ 2020-21ರ ಬಜೆಟ್‍ನಲ್ಲಿ ಆರೋಗ್ಯ ಇಲಾಖೆಯ ಇತರ ಕಾರ್ಯಗಳಿಗೆ ಮಂಜೂರಾದ ಅನುದಾನವನ್ನು ಕೋವಿಡ್ ನಿಯಂತ್ರಣಕ್ಕೆ ಬಳಸಿಕೊಳ್ಳಲಾಗಿದೆ. ರಾಷ್ಟ್ರೀಯ ಯೋಜನೆಗಳಾದ ಕುಟುಂಬ ಯೋಜನೆ, ಕ್ಯಾನ್ಸರ್ ನಿವಾರಣೆ ಸೇರಿದಂತೆ ಹಲವು ಯೋಜನೆಗಳಿಗೆ ಕೇಂದ್ರ ಸರ್ಕಾರ ಪ್ರತೀ ವರ್ಷ ಕೋಟ್ಯಂತರ ರೂಪಾಯಿ ಮೀಸಲಿಡುತ್ತಾ ಬಂದಿದೆ. ಕಳೆದ ಎರಡೂ ಬಜೆಟ್‍ಗಳ ಈ ಅನುದಾನವನ್ನು ಕೋವಿಡ್‍ಗೆ ಉಪಯೋಗಿಸಿಕೊಳ್ಳಲಾಗಿದೆ. ಹೀಗಾಗಿ ರಾಜ್ಯ ಹಾಗೂ ರಾಷ್ಟ್ರೀಯ ಯೋಜನೆ ಜೊತೆಗೆ ಕೋವಿಡ್ ನಿಯಂತ್ರಣಕ್ಕೆ ಹೆಚ್ಚಿನ ಅನುದಾನ ನಿರೀಕ್ಷಿಸಲಾಗುತ್ತಿದೆ.