ಬೆಳಗಾವಿ: ಇಲ್ಲಿನ ಟಿಳಕವಾಡಿಯ 3ನೇ ರಸ್ತೆಗೆ ಹೊಂದಿಕೊಂಡಿರುವ ಮನೆಯೊಂದಕ್ಕೆ ನುಗ್ಗಿದ ಏಳು ಜನ ದರೋಡೆಕೋರರ ಗುಂಪೊಂದು ದಂಪತಿಗೆ ಚಾಕು ತೋರಿಸಿ ಮೈಮೇಲಿನ ಚಿನ್ನಾಭರಣ, ನಗದು ಸೇರಿ ಒಂದೂವರೆ ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿದ ಘಟನೆ ನಡೆದಿದೆ.
ದಂಪತಿಗೆ ಚಾಕು ತೋರಿಸಿ ಮೈಮೇಲಿದ್ದ ಚಿನ್ನಾಭರಣ, ನಗದು ದರೋಡೆ ನಗರದ ಟಿಳಕವಾಡಿ 3ನೇ ಗೇಟ್ ಬಳಿಯ ರಾಣಾ ಪ್ರತಾಪರಾವ್ ರಸ್ತೆಯಲ್ಲಿರುವ ಅಭಿಜಿತ್ ಸಾಮಂತ್ ಎಂಬುವವರ ಮನೆಗೆ ನುಗ್ಗಿದ್ದ 7 ಜನ ದರೋಡೆಕೋರರು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಮೈಮೇಲಿನ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ.
ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮನೆ ಕಿಟಕಿ ಮುರಿದು ಒಳಗೆ ನುಗ್ಗಿದ್ದ ದರೋಡೆಕೋರರು ಕೋಣೆಯೊಂದಕ್ಕೆ ನುಗ್ಗಿ ಕಳ್ಳತನಕ್ಕೆ ಮುಂದಾಗಿದ್ದಾರೆ. ಈ ವೇಳೆ ದರೋಡೆಕೋರರಿಗೆ ಏನು ಸಿಗದಿದ್ದಾಗ ಮತ್ತೊಂದು ಕೋಣೆಯಲ್ಲಿ ಮಲಗಿಕೊಂಡಿದ್ದ ದಂಪತಿಗಳ ಮೇಲೆ ದಾಳಿ ನಡೆಸಿದ ಅವರು ಮಹಿಳೆ ಮೇಲಿದ್ದ ಆಭರಣಗಳನ್ನು ಕಸಿದುಕೊಂಡಿದ್ದಾರೆ.
ಈ ವೇಳೆ ಪ್ರತಿರೋಧ ತೋರಲು ಮುಂದಾದ ಪತಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ದರೋಡೆಕೋರರು ಆತನನ್ನು ಹಗ್ಗದಿಂದ ಎರಡು ಕೈಗಳನ್ನು ಕಟ್ಟಿ ಹಾಕಿ, ದಂಪತಿ ಮೈಮೇಲಿನ ಚಿನ್ನಾಭರಣ, ನಗದು ಸೇರಿ ಒಂದೂವರೆ ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತು ದರೋಡೆ ಮಾಡಿದ್ದಾರೆ.
ದರೋಡೆಕೋರರು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರೆಂದು ದಂಪತಿಗಳು ಮಾಹಿತಿ ನೀಡಿದ್ದು, ಬೆಳಗಾವಿಯ ಉದ್ಯಮಭಾಗ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಸ್ಥಳಕ್ಕೆ ಸಿಪಿಐ ದಯಾನಂದ ಶೇಗುಣಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.