ಬೆಳಗಾವಿ: ಕೃಷ್ಣಾ ನದಿ ತೀರದ ಮೂರು ಜಿಲ್ಲೆಗಳ ಜನ-ಜಾನುವಾರು ಹನಿ ನೀರಿಗೂ ತತ್ವಾರ ಎದುರಿಸುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರ ನೀರಿನ ವಿಚಾರದಲ್ಲಿ ಮೊಂಡುತನ ಪ್ರದರ್ಶಿಸುತ್ತಿರುವ ಹಿನ್ನೆಲೆಯಲ್ಲಿ ಘಟಪ್ರಭಾ ಜಲಾಶಯದಿಂದ ಕೃಷ್ಣ ನದಿ ತೀರದ ಜನರಿಗೆ ನೀರೊದಗಿಸಲು ಸರ್ಕಾರ ಮುಂದಾಗಿದೆ.
ಕರ್ನಾಟಕ-ಮಹಾರಾಷ್ಟ್ರ ಸರ್ಕಾರಗಳ ಮಧ್ಯೆ ಕಳೆದ 15 ದಿನಗಳಿಂದ ಪತ್ರ ವ್ಯವಹಾರ, ಸರ್ಕಾರ-ಪ್ರತಿಪಕ್ಷಗಳಿಂದ ಮಹಾರಾಷ್ಟ್ರಕ್ಕೆ ನಿಯೋಗ ಹೋದರೂ ಕೊಯ್ನಾ ಮೂಲಕ ಕೃಷ್ಣೆಗೆ ನೀರು ಬಿಡಲು ಮಹಾರಾಷ್ಟ್ರ ಸಮ್ಮತಿಸುತ್ತಿಲ್ಲ. ಹಾಗಾಗಿ ಕೃಷ್ಣಾ ನದಿ ತೀರದ ಜನರ ಸಮಸ್ಯೆಗೆ ಕೊನೆಗೂ ಸ್ಪಂದಿಸಿರುವ ರಾಜ್ಯ ಸರ್ಕಾರ ಘಟಪ್ರಭಾ ಜಲಾಶಯದಿಂದ ನಾಳೆಯಿಂದಲೇ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಕೃಷ್ಣೆಗೆ ನೀರು ಬಿಡುತ್ತಿದೆ.
ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದಿಂದ 94 ಕಿ.ಮೀ ದೂರದ ಕೃಷ್ಣಾ ನದಿಗೆ ನೀರು ಹರಿಯಲು 12 ದಿನಗಳ ಅವಶ್ಯಕತೆ ಇದೆ. ನೀರು ಹರಿಸುವ ಕಾರ್ಯಾಚರಣೆ ನಡೆಯಲಿದೆ. ಈ ಸಂಗತಿಯನ್ನು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಘೋಷಿಸಿದ್ದು, ಶನಿವಾರ ಸಂಜೆ ಬೆಳಗಾವಿಯಲ್ಲಿ ಪ್ರಾದೇಶಿಕ ಆಯುಕ್ತ ತುಷಾರ್ ಗಿರಿನಾಥ ಪೊಲೀಸ್, ಹೆಸ್ಕಾಂ ಹಾಗೂ ನೀರಾವರಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ವಿಶೇಷ ಅಂದ್ರೆ ಘಟಪ್ರಭಾದಿಂದ 94 ಕಿ.ಮೀ ದೂರದಲ್ಲಿರುವ ಕೃಷ್ಣಾ ನದಿಗೆ ನೀರು ಹರಿಸುತ್ತಿರುವುದು ಇದೇ ಮೊದಲು.
ಫಲ ಕೊಡುವುದೇ ಹೊಸ ಪ್ರಯತ್ನ!
ಬತ್ತಿ ಹೋಗಿರುವ ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೊಯ್ನಾ ಮೂಲಕ ನೀರು ಪಡೆಯುವ ಯತ್ನ ವಿಫಲವಾಗಿದೆ. ಹೀಗಾಗಿ ಜಿಲ್ಲೆಯ ಘಟಪ್ರಭೆಯ ನೀರನ್ನು ಕೃಷ್ಣೆಗೆ ಹರಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಸರ್ಕಾರದ ಈ ಹೊಸ ಹರಸಾಹಸ ಅನುಷ್ಠಾನ ಸುಲಭದ ಮಾತಲ್ಲ ಎನ್ನಲಾಗುತ್ತಿದೆ. ಘಟಪ್ರಭಾ ಎಡದಂಡೆ ಕಾಲುವೆ ಮೂಲಕ ಈ ನೀರು ಸಾಗುವಾಗ ಮಧ್ಯೆ ರೈತರು ಕಾಲುವೆಯಲ್ಲಿ ಹಾಕಿರುವ ಪಂಪ್‍ಸೆಟ್ ಸ್ತಬ್ಧವಾಗಿರಬೇಕು. ರೈತರು ಯಾರೂ ಕಾಲುವೆ ಬಳಿಗೆ ಹಾಯದಂತೆ ಕ್ರಮವಹಿಸುವಂತೆಯೂ ಪ್ರಾದೇಶಿಕ ಆಯುಕ್ತರು ಸಭೆಯಲ್ಲಿ ಸೂಚನೆ ನೀಡಿದ್ದಾರೆ. ಪಂಪ್‍ಸೆಟ್ ಬಳಸದಂತೆ ಪೊಲೀಸರು ತಡೆದರೆ, ಹೆಸ್ಕಾಂ ವಿದ್ಯುತ್ ಪೂರೈಕೆ ತಡೆದರೆ ಮಾತ್ರ ಘಟಪ್ರಭೆ ಕೃಷ್ಣೆಯನ್ನು ತಲುಪಲು ಸಾಧ್ಯವಾಗುತ್ತದೆ.
ಕೃಷ್ಣೆಗೆ ನೀರು ಹರಿಯುವುದು ಹೇಗೆ:
ಹಿಡಕಲ್ ನಿಂದ ಬಿಡುಗಡೆಯಾಗುವ ನೀರು ಮೊದಲು 22 ಕಿ.ಮೀ ದೂರದ ಮುಖ್ಯ ಕಾಲುವೆ ಮೂಲಕ ಧೂಪದಾಳ ವೇರ್ ಸೇರಬೇಕು. ಅಲ್ಲಿಂದ 50 ಕಿಮೀ ಕಾಲುವೆ ಮೂಲಕ ಮುಗಳಖೋಡ ವಿತರಣಾ ಕೇಂದ್ರ ತಲುಪಬೇಕು. ಬಳಿಕ ನಿಡಗುಂದಿ ವಿತರಣಾ ಕೇಂದ್ರದಿಂದ ಅಥಣಿ ತಾಲೂಕಿನ ಶೇಗುಣಸಿವರೆಗೆ ಮತ್ತೆ 22 ಕಿ.ಮೀ ಸಾಗಬೇಕು. ಹೀಗೆ 94 ಕಿ.ಮೀವರೆಗೆ ನೀರು ಸಾಗಿದ್ರೆ ಮಾತ್ರ ಘಟ್ರಪ್ರಭೆ ಕೃಷ್ಣೆಗೆ ಸೇರಲಿದೆ. ಸದ್ಯ ಹಿಡಕಲ್ ಜಲಾಶಯದಲ್ಲಿ 4 ಟಿಎಂಸಿ ನೀರಿದ್ದು, 2 ಟಿಎಂಸಿ ನೀರನ್ನು ಬಾಗಲಕೋಟೆಗೆ ನೀಡಲು ನಿರ್ಧರಿಸಲಾಗಿದೆ. ಇನ್ನು 1 ಟಿಎಂಸಿ ಹುಕ್ಕೇರಿ, ಸಂಕೇಶ್ವರಗೆ ಮೀಸಲಿಡಬೇಕು. ಒಂದು ಟಿಎಂಸಿ ನೀರು ಮಾತ್ರ ಘಟಪ್ರಭಾ ಮೂಲಕ ಕೃಷ್ಣಾ ನದಿಗೆ ಕಾಲುವೆ ಮೂಲಕ ಹೋಗಲಿದೆ.