ಬೆಳಗಾವಿ : ನ್ಯಾಗಾಲ್ಯಾಂಡ್ ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ನಡೆದ ಅಪಘಾತದಲ್ಲಿ ಮೃತಪಟ್ಟ ಜಿಲ್ಲೆಯ ಶಿವಪುರದ ಯೋಧನ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮದಲ್ಲಿ ನಡೆಯಿತು. ಜಿಲ್ಲೆಯ ಗೋಕಾಕ್ ತಾಲೂಕಿನ ಶಿವಪುರ ಗ್ರಾಮದ ಮಂಜುನಾಥ್ ಗೌಡಣ್ಣವರ (38) ಮೃತ ಯೋಧ.
ಮೃತ ಯೋಧನ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಇಂದು ಬೆಳಗ್ಗೆ 7 ಗಂಟೆಗೆ ಸ್ವಗ್ರಾಮ ಶಿವಪುರಕ್ಕೆ ರಸ್ತೆ ಮೂಲಕ ತರಲಾಯಿತು. ಬಳಿಕ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕುಟುಂಬಸ್ಥರು ಹಾಗೂ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಯಿತು. ನಂತರ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು.
ನೂರಾರು ಜನರು ಮೃತ ಯೋಧನ ಅಂತಿಮ ದರ್ಶನ ಪಡೆದರು ಓದಿ : ಭೀಕರ ಅಪಘಾತ: ನಾಗಾಲ್ಯಾಂಡ್ ಗಡಿಯಲ್ಲಿ ಬೆಳಗಾವಿ ಯೋಧ ವಿಧಿವಶ
ಈ ವೇಳೆ ಸಂಸದೆ ಮಂಗಲಾ ಅಂಗಡಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಳಿಯ ಅಂಬಿರಾವ ಪಾಟೀಲ್, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ತಹಶೀಲ್ದಾರ್ ಪ್ರಕಾಶ್ ಹೊಳೆಪ್ಪಗೋಳ ಸೇರಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.
ಬಳಿಕ ಯೋಧನ ಅಂತ್ಯ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಸಾವಿರಾರು ಜನ ಅಂತಿಮ ಯಾತ್ರೆಗೆ ಸಾಕ್ಷಿಯಾದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಸೇನಾ ಸಮವಸ್ತ್ರ ಧರಿಸಿ ಮೃತ ತಂದೆಗೆ ಪುತ್ರನ ನಮನ :ಮೃತ ಯೋಧನ ಐದು ವರ್ಷದ ಮಗ ಸ್ವರೂಪ್ ತಂದೆಯ ಪಾರ್ಥಿವ ಶರೀರದ ಬಳಿ ಸೇನಾ ಸಮವಸ್ತ್ರದ ರೀತಿಯ ಬಟ್ಟೆ ಧರಿಸಿ ಕುಳಿತು ನಮನ ಸಲ್ಲಿಸಿದ ದೃಶ್ಯ ನೆರೆದಿದ್ದವರ ಕಣ್ಣಾಲಿಗಳನ್ನು ಒದ್ದೆ ಮಾಡಿತು.