ಅಥಣಿ :ಪಟ್ಟಣದ ಆರ್‌ಎಸ್‌ಎಸ್ ಮುಖಂಡರು ಹಾಗೂ ಉತ್ತರ ಕರ್ನಾಟಕ ಪ್ರಾಂತ್ಯ ಸಂಚಾಲಕರಾದ ಅರವಿಂದರಾವ್ ದೇಶಪಾಂಡೆ ಅವರನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ರಮೇಶ್ ಜಾರಕಿಹೊಳಿ ಅವರು ತಮ್ಮ ಆಪ್ತರಿಗೂ ಯಾವುದೇ ಮಾಹಿತಿ ನೀಡದೆ ಆರ್‌ಎಸ್‌ಎಸ್ ಮುಖಂಡರನ್ನು ಭೇಟಿ ಮಾಡಿ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು.
ಆರ್‌ಎಸ್‌ಎಸ್ ಮುಖಂಡರ ಭೇಟಿ ಬಳಿಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿರುವುದು.. ಆರ್‌ಎಸ್‌ಎಸ್ ಪ್ರಮುಖರನ್ನು ಭೇಟಿಯಾದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ಒಂದು ಸಹಜವಾದ ಭೇಟಿ, ಇದರಲ್ಲಿ ವಿಶೇಷ ಅರ್ಥ ಇಲ್ಲ.
ನಾನು ಈ ಕಡೆ ಬಂದಾಗ ಹಿರಿಯರನ್ನು ಭೇಟಿಯಾಗುತ್ತೇನೆ. ಸಚಿವ ಸ್ಥಾನದ ಬಗ್ಗೆ ನಾನು ಹೆಚ್ಚು ಒತ್ತು ನೀಡಿಲ್ಲ, ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದರು.
ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನದ ಬಗ್ಗೆ ಹೈಕಮಾಂಡ್ಗೆ ತಿಳಿಸಲಾಗಿದೆ. ವರಿಷ್ಠರು ಯಾವುದೇ ತೀರ್ಮಾನ ತೆಗೆದುಕೊಂಡರು ನಾವು ಬದ್ಧರಾಗಿರುತ್ತೇವೆ.
ಮುಂಬರುವ ಸಾರ್ವತ್ರಿಕ ಚುನಾವಣೆವರೆಗೂ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ಸರ್ಕಾರ ನಡೆಯುತ್ತದೆ. ಮುಖ್ಯಮಂತ್ರಿ ಬದಲಾವಣೆ ಮಾತೇ ಇಲ್ಲ ಎಂದರು.