ಬೆಳಗಾವಿ: ಚನ್ನಮ್ಮ ಕಿತ್ತೂರು ಮತಕ್ಷೇತ್ರದ ಮಾಜಿ ಶಾಸಕರು, ಮಾಜಿ ಸಚಿವರು ಆದ ಡಿಬಿ ಇನಾಮದಾರ್ ಅವರು ಇಂದು ನಿಧರಾಗಿದ್ದಾರೆ. ನ್ಯುಮೋನಿಯಾ, ಲಂಗ್ಸ್ ಇಂಫೆಕ್ಷನ್ನಿಂದ ಬಳಲುತ್ತಿದ್ದ 74 ವರ್ಷದ ಇನಾಮದಾರ್ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕಳೆದ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಡಿಬಿ ಇನಾಮದಾರ್ ಅವರ ನಿಧನದ ಸುದ್ದಿ ಗೊತ್ತಾಗುತ್ತಿದ್ದಂತೆ ಸ್ವಗ್ರಾಮ ನೇಗಿನಹಾಳ ಸೇರಿ ಚನ್ನಮ್ಮ ಕಿತ್ತೂರು ಕ್ಷೇತ್ರದಲ್ಲಿ ದುಃಖ ಮಡುಗಟ್ಟಿದೆ.
ದಾನಪ್ಪಗೌಡ ಬಸನಗೌಡ ಇನಾಮದಾರ್ ಅವರು 1948 ಜುಲೈ 2ರಂದು ಜನಿಸಿದ್ದು, ಅವರು ಬೆಳಗಾವಿಯ ಸೇಂಟ್ ಪಾಲ್ಸ್, ಲಿಂಗರಾಜ ಮಹಾವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ. 1978ರಲ್ಲಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಆಯ್ಕೆ ಆದರು. ಬಳಿಕ ಹಲವು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಸಿರಸಂಗಿ ಲಿಂಗರಾಜ ಟ್ರಸ್ಟ್ ಅಧ್ಯಕ್ಷರು, ಕಿತ್ತೂರು ಸೈನಿಕ ಶಾಲೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪುತ್ರಿ ಬಿನಿತಾ ವಿಜಯಕುಮಾರ ಸೋನವಾಲ್ಕರ್, ಪುತ್ರರಾದ ವಿಕ್ರಮ ಇನಾಮದಾರ್, ಬಸನಗೌಡ ಇನಾಮದಾರ್ ಸೇರಿದಂತೆ ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.
ಸರಳ ಸಜ್ಜನಿಕೆ, ದಕ್ಷ ಆಡಳಿತದಿಂದ ಗುರುತಿಸಿಕೊಂಡಿದ್ದ ಡಿಬಿ ಇನಾಮದಾರ್ ಅವರು ಅಪರೂಪದ ರಾಜಕಾರಣಿ. ಎಲ್ಲರೂ ಪ್ರೀತಿಯಿಂದ ಅವರನ್ನು ಧಣಿ ಎಂದು ಕರೆಯುತ್ತಿದ್ದರು. 1983 ಮತ್ತು 1985ರಲ್ಲಿ ಜನತಾ ಪಕ್ಷದಿಂದ ಶಾಸರಾಗಿ ಆಯ್ಕೆಯಾಗಿದ್ದ ಡಿಬಿ ಇನಾಮದಾರ್, ನಂತರ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ 1994 ಮತ್ತು 1999ರಲ್ಲಿ ಗೆದ್ದಿದ್ದರು. 2013ರಲ್ಲಿ ಮತ್ತೆ ಡಿಬಿ ಇನಾಮದಾರ ಶಾಸಕರಾಗಿದ್ದರು.