ಬೆಳಗಾವಿ: ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ಪ್ರವಾಹದ ಜತೆಗೆ ಗೋಕಾಕ್ ಕ್ಷೇತ್ರದ ಉಪಚುನಾವಣೆ ಸಂಬಂಧ ಗೌಪ್ಯ ಚರ್ಚೆ ನಡೆಸಿ ಕುತೂಹಲ ಮೂಡಿಸಿದ್ದಾರೆ.
ಗೋಕಾಕ್ ಕ್ಷೇತ್ರದ ಮೇಲೆ ಸಿದ್ದರಾಮಯ್ಯ ಕಣ್ಣು.. ಸಾಹುಕಾರ್ ಸೋದರರೊಂದಿಗೆ ಗೌಪ್ಯ ಚರ್ಚೆ..
ಬೆಳಗಾವಿಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಮಾಜಿ ಸಿಎಂ ಸಿದ್ದಾರಾಮಯ್ಯ, ವಿಧಾನಸಭೆ ಉಪಚುನಾವಣೆ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.
ತಮ್ಮ ಸ್ವಂತ ಕಾರಿನಲ್ಲೇ ಶಾಸಕ ಸತೀಶ್ ಜಾರಕಿಹೊಳಿ ಹಾಗೂ ಉದ್ಯಮಿ ಲಖನ್ ಜಾರಕಿಹೊಳಿ ಅವರನ್ನು ಕೂರಿಸಿಕೊಂಡು ಸಿದ್ದರಾಮಯ್ಯ ರಾಜಕೀಯ ಚರ್ಚೆ ನಡೆಸಿದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಬಹಿರಂಗವಾಗಿ ಬಿಜೆಪಿ ಬೆಂಬಲಿಸಿದ್ದರು. ಹೀಗಾಗಿ ಗೋಕಾಕ್ ಕ್ಷೇತ್ರದ ಉಸ್ತುವಾರಿಯನ್ನು ಲಖನ್ ಜಾರಕಿಹೊಳಿಗೆ ನೀಡಲಾಗಿತ್ತು.
ಗೋಕಾಕ್ ಕ್ಷೇತ್ರದ ಉಪಚುನಾವಣೆ ನಡೆದರೆ ಲಖನ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಸಿದ್ದರಾಮಯ್ಯಗೆ ಸತೀಶ್ ಜಾರಕಿಹೊಳಿ ಪ್ರಸ್ತಾಪ ಇಟ್ಟಿದ್ದರು. ರಮೇಶ್ ಜಾರಕಿಹೊಳಿ ಅನರ್ಹಗೊಂಡಿದ್ದು, ಕಾನೂನು ಹೋರಾಟ ನಡೆಸುತ್ತಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಬಳಿಕ ಗೋಕಾಕ್ ಕ್ಷೇತ್ರಕ್ಕೆ ಉಪಚುನಾವಣೆ ನಡೆದರೆ ಲಖನ್ ಕಾಂಗ್ರೆಸ್ ಅಭ್ಯರ್ಥಿ ಆಗುವುದಕ್ಕೆ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಲ್ಲದೇ ಉಭಯ ಸಹೋದರರಿಗೆ ಈಗಿನಿಂದಲೇ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆಯೂ ಸೂಚನೆ ನೀಡಿದ್ದಾರೆ.