ಬೆಳಗಾವಿ :ಖಾನಾಪುರ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಆಗುತ್ತಿರುವುದರಿಂದ ಮಲಪ್ರಭಾ ನದಿಗೆ ನೀರಿನ ಒಳಹರಿವು ಹೆಚ್ಚಳವಾಗಿದೆ. ಹೀಗಾಗಿ ನವಿಲುತೀರ್ಥ ಡ್ಯಾಮ್‌ನಿಂದ ದಿಢೀರ್ 12500 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.
ಡ್ಯಾಂ ಒಟ್ಟು 37 ಟಿಎಂಸಿ ಸಾಮರ್ಥ್ಯವನ್ನು ಹೊಂದಿದ್ದು, ಸದ್ಯ 28ಟಿಎಂಸಿ ನೀರು ಭರ್ತಿಯಾಗಿದೆ. ಒಳಹರಿವು ಹೆಚ್ಚಿದಂತೆ ಬಿಡುಗಡೆಯ ಪ್ರಮಾಣವೂ ಹೆಚ್ಚಾಗಲಿದೆ. ಪರಿಣಾಮ, ರಾಮದುರ್ಗ ಪಟ್ಟಣ ಸೇರಿದಂತೆ ಸುತ್ತಲಿನ ಸುಮಾರು 30ಕ್ಕೂ ಹೆಚ್ಚು ಹಳ್ಳಿಗಳಿಗೆ ಪ್ರವಾಹದ ಭೀತಿ ಕಾಡುತ್ತಿದೆ. ಇದರ ಜೊತೆಗೆ ಗದಗ, ಬಾಗಲಕೋಟೆ ಜಿಲ್ಲೆಗಳಲ್ಲೂ ಮಲಪ್ರಭಾ ತೀರದ ಜನತೆ ಎಚ್ಚರಿಕೆಯಿಂದ ಇರಬೇಕೆಂದು ನವಿಲುತೀರ್ಥ ಡ್ಯಾಂನ ಅಧಿಕಾರಿಗಳು ತಿಳಿಸಿದ್ದಾರೆ.
ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ :ನವೀನ ತೀರ್ಥ ಡ್ಯಾಂನಿಂದ ನೀರು ಹೊರ ಬಿಡುತ್ತಿರುವ ಹಿನ್ನೆಲೆ ಮುನವಳ್ಳಿ, ರಾಮದುರ್ಗ ಸೇರಿ ನೂರಾರು ಗ್ರಾಮಗಳು ಜಲಾವೃತವಾಗುವ ಆತಂಕ ಎದುರಿಸುತ್ತಿವೆ.
ಸದ್ಯ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಮತ್ತಷ್ಟು ನೀರನ್ನು ಹೊರಕ್ಕೆ ಬಿಟ್ಟರೆ ರಾಮದುರ್ಗ ತಾಲೂಕಿನ ಸಾಕಷ್ಟು ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಲಿವೆ. ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಂಬಂಧಿಸಿದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ವೇದಗಂಗಾ ನದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಡಿಸಿ :ನೆರೆಯ ಮಹಾರಾಷ್ಟ್ರ ಹಾಗೂ ಜಿಲ್ಲೆಯಲ್ಲಿ ಕಳೆದ 3 ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವುದರಿಂದ ನದಿ ತೀರದ ಗ್ರಾಮಗಳ ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ತಿಳಿಸಿದರು.
ವೇದಗಂಗಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ಹಿನ್ನೆಲೆ ಶುಕ್ರವಾರ ನಿಪ್ಪಾಣಿ ತಾಲೂಕಿನ ಕೋಡಣಿ ಗ್ರಾಮ ಸೇರಿದಂತೆ ವಿವಿಧೆಡೆ ಭೇಟಿ ನೀಡಿ ಅವರು ಪರಿಶೀಲಿಸಿದರು. ತುರ್ತು ಸಂದರ್ಭದಲ್ಲಿ ನದಿ ತೀರದ ಗ್ರಾಮಗಳ ಜನರ ಸ್ಥಳಾಂತರಕ್ಕೆ ಈಗಾಗಲೇ ಗುರುತಿಸಲಾಗಿರುವ ಕಾಳಜಿ ಕೇಂದ್ರಗಳಲ್ಲಿ ಜನರಿಗೆ ತಾತ್ಕಾಲಿಕ ಊಟೋಪಹಾರ ಹಾಗೂ ವಸತಿ ಸೌಕರ್ಯ ಕಲ್ಪಿಸಲಾಗಿದೆ ಎಂದರು.