ಚಿಕ್ಕೋಡಿ (ಬೆಳಗಾವಿ): ಪ್ರವಾಹ ಬಂದು ಒಂದು ವರ್ಷ ಕಳೆದರೂ ಇನ್ನೂ ಕೂಡಾ ಪರಿಹಾರ ದೊರತಿಲ್ಲ ಎಂದು ಕೆಲವರು ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಮತ್ತೆ ಕೆಲವರು ಪರಿಹಾರ ಹಣ ಬಂದ್ರೂ ಸಹಿತ ಮನೆ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ.
ಇಂತಹ ಘಟನೆಗಳು ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದ್ದು ಕೆಲವರು ಮನೆ ಕಟ್ಟಲು ಪರಿಹಾರ ಹಣವಾಗಿ ಸರ್ಕಾರದಿಂದ 1 ಲಕ್ಷ ರೂಪಾಯಿ ಪಡೆದಿದ್ದಾರೆ. ಆದರೆ, ಅವರು ಈವರೆಗೂ ಮನೆ ಕಾಮಗಾರಿ ಪ್ರಾರಂಭಿಸಿಲ್ಲ.
ನಿರ್ಮಾಣವಾಗದ ಪ್ರವಾಹ ಸಂತ್ರಸ್ತರ ಸೂರು.. ಚಿಕ್ಕೋಡಿ ತಹಶೀಲ್ದಾರ್ ಖಡಕ್ ಎಚ್ಚರಿಕೆ ಪ್ರವಾಹಕ್ಕೂ ಮುನ್ನವೆ ಮನೆ ನಿರ್ಮಾಣ ಮಾಡುವ ಸಲುವಾಗಿ ಈಗಾಗಲೇ ಸರ್ಕಾರ ಪರಿಹಾರ ನೀಡಿದೆ. ಕೆಲ ಫಲಾನುಭವಿಗಳು ಮನೆ ನಿರ್ಮಾಣ ಮಾಡಿಲ್ಲ. ಮುಂಬರುವ ದಿನಗಳಲ್ಲಿ ಅವರು ಮನೆ ನಿರ್ಮಾಣ ಮಾಡಿಕೊಳ್ಳದೆ ಇದ್ದರೆ ಅಂತವರಿಗೆ ಸರ್ಕಾರದಿಂದ ನೋಟಿಸ್ ನೀಡಿ ಸರ್ಕಾರ ನೀಡಿದ ₹1 ಲಕ್ಷ ಪರಿಹಾರ ವಾಪಸ್ ಪಡೆದುಕೊಳ್ಳಲಾಗುವುದು ಎಂದು ಚಿಕ್ಕೋಡಿ ತಹಶೀಲ್ದಾರ್ ಸುಭಾಷ್ ಸಂಪಗಾಂವಿ ತಿಳಿಸಿದ್ದಾರೆ.
ಕಳೆದ ಅಗಸ್ಟ್ ತಿಂಗಳಿನಲ್ಲಿ ಕೃಷ್ಣಾ ನದಿಗೆ ಭೀಕರ ಪ್ರವಾಹದಿಂದ ಸಾಕಷ್ಟು ಮನೆಗಳ ನೆಲಸಮವಾಗಿದ್ದು, ಇದರಿಂದ ಪ್ರವಾಹ ಸಂತ್ರಸ್ತರು ಚಿಂತೆಯಲ್ಲಿದ್ದಾಗ ರಾಜ್ಯ ಸರ್ಕಾರ ಸಂತ್ರಸ್ತರ ನೆರವಿಗೆ ಧಾವಿಸಿ ಕೂಡಲೇ ಎ ಮತ್ತು ಬಿ ಕೆಟಗೆರಿ ಮನೆಗಳಿಗೆ 5 ಲಕ್ಷ ರೂಪಾಯಿ ಹಣವನ್ನು ಬಿಡುಗಡೆ ಮಾಡಿತ್ತು.
ಮನೆ ಕಟ್ಟುವ ಮುಂಚಿತವಾಗಿ 1ಲಕ್ಷ ರೂಪಾಯಿ ನೀಡಿತ್ತು. ಆದರೆ, ವರ್ಷ ಕಳೆದರೂ ಹಣ ಪಡೆದು ಮನೆ ಕಟ್ಟಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಚಿಕ್ಕೋಡಿ ತಾಲೂಕಿನ ನದಿ ತೀರದ ಗ್ರಾಮಗಳಾದ ಯಡೂರ, ಮಾಂಜರಿ, ಚಂದೂರ, ಇಂಗಳಿ, ಭಾವನ ಸೌಂದತ್ತಿ ಸೇರಿದಂತೆ ಮುಂತಾದ ಗ್ರಾಮಗಳಲ್ಲಿ ಕೆಲ ಫಲಾನುಭವಿಗಳು ಮನೆ ನಿರ್ಮಾಣಕ್ಕೆ ಇನ್ನೂ ಮುಂದಾಗಿಲ್ಲ.
ಹೀಗಾಗಿ ಚಿಕ್ಕೋಡಿ ತಹಶೀಲ್ದಾರ್ ಖಡಕ್ ಆದೇಶ ನೀಡಿದ್ದು, ಪಲಾನುಭವಿಗಳು ಮನೆ ನಿರ್ಮಾಣ ಮಾಡದೆ ಇದ್ದರೆ ಅಂತಹವರು ಸರ್ಕಾರ ನೀಡಿದ 1 ಲಕ್ಷ ಪರಿಹಾರ ಹಣವನ್ನು ವಾಪಸ್ ನೀಡಿ ಎಂದಿದ್ದಾರೆ. ಚಿಕ್ಕೋಡಿ ತಾಲೂಕಿನಲ್ಲಿ ಎ ಕೆಟಗೆರಿಯಲ್ಲಿ 538 ಮನೆಗಳಿಗೆ ತಲಾ 1 ಲಕ್ಷ ರೂಪಾಯಿ ಬಿಡುಗಡೆಯಾಗಿವೆ. ಅದರಲ್ಲಿ 377 ಮನೆಗಳ ನಿರ್ಮಾಣ ಆರಂಭವಾಗಿದ್ದು, ಇನ್ನುಳಿದಂತೆ 161 ಮನೆಗಳು ಇನ್ನೂ ಆರಂಭವಾಗಿಲ್ಲ.
ಬಿ ಕೆಟಗೇರಿಯ 1,227 ಮನೆಗಳಲ್ಲಿ 795 ಮನೆಗಳ ಕಾಮಗಾರಿ ಪ್ರಾರಂಭವಿದ್ದರೆ, 432 ಮನೆಗಳು ಇನ್ನೂ ಆರಂಭವಾಗಿಲ್ಲ. ಒಟ್ಟಿನಲ್ಲಿ ಎ ಹಾಗೂ ಬಿ ಕೆಟಗೆರಿ ಸೇರಿಸಿ ಒಟ್ಟು 593 ಮನೆಗಳಿಗೆ ತಾಲೂಕಾಡಳಿತ ಕಾಮಗಾರಿ ಪ್ರಾರಂಭಿಸುವಂತೆ ನೋಟಿಸ್ ಜಾರಿಮಾಡಿದೆ.
ಸರ್ಕಾರ ಪ್ರವಾಹದಿಂದ ತತ್ತರಿಸಿಹೋಗಿದ್ದ ಪ್ರವಾಹ ಸಂತ್ರಸ್ತರ ಬಾಳಲ್ಲಿ ಸೂರು ಕಲ್ಪಿಸಿ ಬೆಳಕು ಮೂಡಿಸುವ ಭರವಸೆಯಲಿದ್ದರೆ. ಫಲಾನುಭವಿಗಳು ಮಾತ್ರ ಹಣ ಪಡೆದು ಮನೆಗಳನ್ನು ನಿರ್ಮಿಸಿಕೊಳ್ಳದೆ ಇರುವುದು ವಿಪರ್ಯಾಸದ ಸಂಗತಿಯಾಗಿದೆ.