ಬೆಳಗಾವಿ:ಜಿಲ್ಲೆಯಲ್ಲಿ ವರುಣ ಆರ್ಭಟ ಮುಂದುವರೆದ ಹಿನ್ನೆಲೆ ಮತ್ತೊಬ್ಬ ವ್ಯಕ್ತಿ ಮಲಪ್ರಭಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದ್ದು, ಎನ್ಡಿಆರ್ ಎಫ್ ತಂಡದ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದ ಉಸ್ಮಾನ್ ಸಾಬ್ ಅತ್ತಾರ (52) ನೀರಿನ ಕೊಚ್ಚಿಕೊಂಡು ಹೋಗಿರುವ ವ್ಯಕ್ತಿ. ನಿನ್ನೆ ಸವದತ್ತಿ ತಾಲೂಕಿನ ಯಕ್ಕಂಡಿ ಬಳಿ ತನ್ನ ಇಬ್ಬರು ಮಕ್ಕಳೊಂದಿಗೆ ಸೇರಿ ಮೀನು ಹಿಡಿಯಲು ಹೋಗಿದ್ದರು. ಈ ವೇಳೆ ಮೀನು ಹಿಡಿಯಲು ತೆಗೆದುಕೊಂಡು ಹೋಗಿದ್ದ ತೆಪ್ಪ ಮುಳುಗಿ ಈ ಅವಘಡ ಸಂಭವಿಸಿದ್ದು, ಆತನ ಇಬ್ಬರು ಮಕ್ಕಳು ಈಜಿ ದಡ ಸೇರಿದ್ದಾರೆ. ನಾಪತ್ತೆ ಆಗಿರುವ ಹುಸೇನ್ ಸಾಬ್ ಅತ್ತಾರ ಪತ್ತೆಗೆ ಎನ್ಡಿಆರ್ಎಫ್ ತಂಡದ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ನೀರು ಪಾಲಾದ ರೈತ ಸಿದ್ರಾಯಿ ದೊಡ್ಡರಾಮಾ ಸುತಗಟ್ಟಿ ಮಾರ್ಕಂಡೇಯ ನದಿ ನೀರಿನಲ್ಲಿ ಕೊಚ್ಚಿಹೋದ ರೈತ:
ಪ್ರವಾಹಕ್ಕೆ ಸಿಲುಕಿದ ರೈತನೋರ್ವ ಮಾರ್ಕಂಡೇಯ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಶುಕ್ರವಾರ ಸಂಜೆ ನಡೆದಿತ್ತು. ತಾಲೂಕಿನ ಕಾಕತಿ ಗ್ರಾಮದ ಸಿದ್ರಾಯಿ ದೊಡ್ಡರಾಮಾ ಸುತಗಟ್ಟಿ (65) ನದಿಯಲ್ಲಿ ಕೊಚ್ಚಿ ಹೋದ ರೈತ. ಇವರು ಎಂದಿನಂತೆ ಜಮೀನಿನಲ್ಲಿ ಕೃಷಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಬರುತ್ತಿದ್ದ ವೇಳೆ ಮಾರ್ಕಂಡೇಯ ನದಿಯ ಸೇತುವೆ ಬಳಿ ಕೈಕಾಲು ತೊಳೆದುಕೊಳ್ಳಲು ಹೋಗಿದ್ದರು. ಈ ವೇಳೆ ಕಾಲು ಜಾರಿ ಬಿದ್ದು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಬೆಳಗಾವಿ ಎಸಿ ರವಿ ಕರಲಿಂಗನ್ನವರ ಮತ್ತು ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದರು.
ಶೋಧ ಕಾರ್ಯಾಚರಣೆಗೆ ಮಳೆ ಅಡ್ಡಿ:
13 ಜನರ ಎಸ್‌ಡಿಆರ್‌ಎಫ್ ತಂಡದಿಂದ ಸಿದ್ರಾಯಿ ದೊಡ್ಡರಾಮಾ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ನಿನ್ನೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡದ ಸದಸ್ಯರು ಕತ್ತಲು ಆವರಿಸಿದ್ದರಿಂದ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು. ಇಂದು ಬೆಳಗ್ಗೆ ಮತ್ತೆ ಶೋಧ ಕಾರ್ಯಾಚರಣೆ ಆರಂಭವಾಗಿದ್ದು, ಮಳೆ ಅಡ್ಡಿಪಡಿಸುತ್ತಿದೆ. ತಾಲೂಕಿನ ಕಾಕತಿ ಕಡೋಲಿ ಬ್ರಿಡ್ಜ್ ಕಮ್ ಬ್ಯಾರೇಜ್ ಬಳಿ ಎಸ್‌ಡಿಆರ್‌ಎಫ್ ಸಿಬ್ಬಂದಿ, ಸುರಿಯುತ್ತಿರುವ ಮಳೆಯಲ್ಲಿಯೇ ಒಬಿಎಂ ಮಷಿನ್ ಬೋಟ್ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಓದಿ : ಹಿಂಗ್ ಸುರಿದ್ರೇ ಹೆಂಗೋ ಮಳೆರಾಯ.. ಕುಂದಾನಗರಿಯಲ್ಲಿ ನದಿಯಂತಾದ ಕಬ್ಬಿನ ಗದ್ದೆಗಳು..