ಅಥಣಿ: ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಸೋಂಕಿನಿಂದ ಮೃತಪಟ್ಟ ಸಾರಿಗೆ ಸಿಬ್ಬಂದಿಗೆ ತಲಾ 30 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಘೋಷಣೆ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಹಂತ ಹಂತವಾಗಿ ಪರಿಹಾರ ವಿತರಣೆ ಕಾರ್ಯ ನಡೆಯಲಿದೆ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ ತಾಲೂಕಿನ ಯಕ್ಕಂಚ್ಚಿ ಗ್ರಾಮದ ಹುಲಿಕೋಡಿ ಕೆರೆಗೆ ಬಾಗಿನ (ತೆಪ್ಪ) ಅರ್ಪಣೆ ಮಾಡಿ ಬಳಿಕ ಮಾಧ್ಯಮಗಳ ಜತೆ ಅವರು ಮಾತನಾಡಿದರು. ಕೋವಿಡ್ ಮೊದಲ ಅಲೆಯ ವೇಳೆ ವ್ಯಾಕ್ಸಿನ್ ಬಂದಿರಲಿಲ್ಲ. ನಮ್ಮ ಇಲಾಖೆಯಿಂದ ಅದೆಷ್ಟೋ ಜನರು ಕೋವಿಡ್ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಚಾಲಕರು, ನಿರ್ವಾಹಕರು ಸೇವಾನಿರತ ಸಮಯದಲ್ಲಿ ಕೊರೊನಾ ದೃಢಪಟ್ಟು ಮೃತಪಟ್ಟರೆ ಅವರ ಕುಟುಂಬದವರಿಗೆ ಮಾತ್ರ ಪರಿಹಾರ ವಿತರಣೆ ಮಾಡಲಾಗುವುದು. ಸಾರಿಗೆ ನೌಕರರು ಮನೆಯಲ್ಲಿದ್ದುಕೊಂಡು ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಡಿಸಿಎಂ ಸವದಿ ಸ್ಪಷ್ಟಪಡಿಸಿದರು.
ಅಥಣಿ ತಾಲೂಕಿನ ಕೆರೆ ತುಂಬಿಸುವ ಯೋಜನೆ ಬಗ್ಗೆ ಪ್ರತಿಕ್ರಿಯಿಸುತ್ತಾ, ಕೊರೊನಾದಿಂದ ಸರ್ಕಾರದ ಹಣಕಾಸಿನ ಸ್ಥಿತಿ ಚೆನ್ನಾಗಿಲ್ಲ. ಇದರಿಂದ ಅಥಣಿ ಭಾಗದ ಕೆರೆಗಳನ್ನು ತುಂಬಿಸುವ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಪ್ರಾರಂಭಿಸಲಾಗುವುದು ಎಂದರು.