ಬೆಳಗಾವಿ: ಜಿಲ್ಲೆಯ ಮತ್ತೋರ್ವ ಶಾಸಕ ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಅನರ್ಹಗೊಂಡಿದ್ದು, ರಮೇಶ್ ಜಾರಕಿಹೊಳಿ ಅವರ ಮೇಲಿನ ನಿಷ್ಠೆಗೆ ಈ ಇಬ್ಬರೂ ರಾಜಕೀಯ ಮುಖಂಡರು ತಮ್ಮ ಭವಿಷ್ಯ ಹಾಳು ಮಾಡಿಕೊಂಡರೇ ಎಂಬ ಚರ್ಚೆಗಳು ತೀವ್ರಗೊಂಡಿವೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‍ನಲ್ಲಿದ್ದ ಶ್ರೀಮಂತ ಪಾಟೀಲರನ್ನು ಕಾಂಗ್ರೆಸ್‍ಗೆ ಕರೆ ತಂದಿದ್ದ ರಮೇಶ್ ಜಾರಕಿಹೊಳಿ, ಅವರಿಗೆ ಟಿಕೆಟ್ ಕೊಡಿಸಿ ಗೆಲ್ಲಿಸಿದ್ದು ಇತಿಹಾಸ. ಎರಡ್ಮೂರು ಬಾರಿ ಸೋತಿದ್ದ ಶ್ರೀಮಂತ ಪಾಟೀಲ್ ಕೊನೆಗೂ ಗೆಲುವು ಕಂಡಿದ್ದರು.
ಇನ್ನು 2018ರ ವಿಧಾನಸಭಾ ಚುನಾವಣೆಗೆ ಅಥಣಿ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಸಿಗದಾಗ ಮಹೇಶ್ ಕುಮಟಳ್ಳಿ ಅವರ ಹೆಸರನ್ನು ರಮೇಶ್ ಜಾರಕಿಹೊಳಿ ಅಂತಿಮಗೊಳಿಸಿ, ಹೈಕಮಾಂಡ್ನಿಂದ ಟಿಕೆಟ್ ಕೊಡಿಸಿದ್ದರು. ಒಲ್ಲದ ಮನಸ್ಸಿನಿಂದ ಚುನಾವಣೆಗೆ ನಿಂತಿದ್ದ ಮಹೇಶ್ ಕುಮಟಳ್ಳಿ ಅಚ್ಚರಿ ರೀತಿಯಲ್ಲಿ ಗೆಲುವು ದಾಖಲಿಸಿದ್ದರು.
ಮೈತ್ರಿ ಸರ್ಕಾರದ ನಡೆಯಿಂದ ಬಂಡಾಯವೆದ್ದಿದ್ದ ರಮೇಶ್ ಜಾರಕಿಹೊಳಿ ಜತೆಗೆ ಮಹೇಶ್ ಕುಮಟಳ್ಳಿ ಕೂಡ ಮುಂಬೈ ಸೇರಿದ್ದರು.
ಈಗ ಅನರ್ಹ ಅಸ್ತ್ರದಿಂದ ಪಾರಾಗಲು ಕಾನೂನು ಹೋರಾಟ ಮಾಡಬೇಕಿದೆ. ಕಾನೂನು ಹೋರಾಟದಲ್ಲಿ ಗೆದ್ದರೆ ರಾಜಕೀಯ ಭವಿಷ್ಯ ಜೀವಂತವಾಗಿರಲು ಸಾಧ್ಯ. ಇಲ್ಲದಿದ್ರೆ 15ನೇ ವಿಧಾನಸಭೆ ಅವಧಿ ಮುಗಿಯುವ ತನಕ ಅನರ್ಹವಾಗಿ ಉಳಿಯಬೇಕಾಗುತ್ತದೆ.