ಬೆಳಗಾವಿ:ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಸಿಬ್ಬಂದಿಗಳ ಅಕ್ರಮ ನೇಮಕಾತಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸ್ನಾತಕೋತ್ತರ ಹಾಗೂ ಸಂಶೋಧಕರ ಒಕ್ಕೂಟ ವತಿಯಿಂದ ಸುವರ್ಣ ಗಾರ್ಡನ್ ಟೆಂಟ್ ಬಳಿ ಪ್ರತಿಭಟನೆ ನಡೆಸಲಾಯಿತು.
2023 ರ ಮೇ 29 ರಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಅಕ್ರಮವಾಗಿ ನೇಮಕವಾಗಿರುವ ಬೋಧಕ ಬೋಧಕೇತರ ಹುದ್ದೆಗಳನ್ನು ರದ್ದುಗೊಳಿಸಿ ಮರು ಅಧಿಸೂಚನೆ ಹೊರಡಿಸುವಂತೆ ಅನೇಕ ಸಲ ಮನವಿ ಸಲ್ಲಿಸಿದರೂ ನ್ಯಾಯ ಸಿಕ್ಕಿಲ್ಲ. ಅಕ್ರಮವಾಗಿರುವ ನೇಮಕಾತಿಯನ್ನು ಅಧಿಕಾರಿಗಳು ಸಕ್ರಮ ಮಾಡಲು ಹೊರಟಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಈ ವೇಳೆ ಮಾತನಾಡಿದ ಹೋರಾಟಗಾರ ಸಿದ್ದಪ್ಪ, ಸ್ನಾತಕೋತ್ತರ ಪದವಿ ಪಡೆದರೂ ಇವರ ಅವ್ಯವಹಾರ, ಅಕ್ರಮಗಳಿಂದ ನಮಗೆ ನೌಕರಿ ಸಿಗುತ್ತಿಲ್ಲ. ಕೂಡಲೇ ಅಕ್ರಮ ನೇಮಕಾತಿಯನ್ನು ರದ್ದುಗೊಳಿಸಿ ಮರು ಅಧಿಸೂಚನೆ ಹೊರಡಿಸಬೇಕು. ಅಲ್ಲದೇ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಯುಜಿಸಿ ನಿಯಮ ಗಾಳಿಗೆ ತೂರಿದ್ದಾರೆ. ಪಿಎಸ್ಐ ನೇಮಕಾತಿಗೆ ಹೊಸದಾಗಿ ಆದೇಶ ಹೊರಡಿಸಿದಂತೆ ಇಲ್ಲಿಯೂ ಮರು ನೇಮಕಾತಿಗೆ ಆಗ್ರಹಿಸಿದರು.
ಒಕ್ಕೂಟದ ಅಧ್ಯಕ್ಷ ಶಿವಸೋಮಪ್ಪ ನಿಟ್ಟೂರು ಮಾತನಾಡಿ, 2023 ರ ಮೇ 29 ರಂದು ಸಿಂಡಿಕೇಟ್ ಸಭೆ ಮಾಡಿ ಯುಜಿಸಿ ನಿಯಮ ಗಾಳಿಗೆ ತೂರಿ ನೇಮಕ ಮಾಡಿದ್ದಾರೆ. ಅಕ್ರಮವಾಗಿ ನೇಮಕಗೊಂಡಿರುವ ಅಧಿಕಾರಿಗಳನ್ನು ಬಂಧಿಸಬೇಕು. ಇನ್ನು ಸೂಕ್ತ ತನಿಖೆ ಮಾಡಬೇಕು, ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ನೇಮಕ ಮಾಡಬೇಕು. ಭ್ರಷ್ಟ ಅಧಿಕಾರಿಗಳನ್ನು ಬಂಧಿಸುವಂತೆ ಆಗ್ರಹಿಸಿದರು.