ಬೆಳಗಾವಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸುದ್ದಿ ಕಳೆದ ಒಂದು ವಾರದಿಂದ ಸದ್ದು ಮಾಡ್ತಿದೆ. ಆದ್ರೆ ಈ ಕುರಿತಂತೆ ಡಿಸಿಎಂ ಗೋವಿಂದ್ ಕಾರಜೋಳ್ ಬೇರೆಯದ್ದೇ ಹೇಳಿಕೆ ನೀಡಿದ್ದಾರೆ. ಸಿಎಂ ಬದಲಾವಣೆ ಕೇವಲ ಮಾಧ್ಯಮಗಳ ಸೃಷ್ಟಿ ಎಂದಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಹೇಳಿದರು. ಅಧಿಕೃತವಾಗಿ ನಮ್ಮ ಹೈಕಮಾಂಡ್ನಿಂದ ಈವರೆಗೂ ಯಾವುದೇ ಮಾಹಿತಿ ಬಂದಿಲ್ಲ. ಹೀಗಾಗಿ ನಮ್ಮ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರೇ ಇರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ಕೇವಲ ಮಾಧ್ಯಮ ಸೃಷ್ಟಿ: ಡಿಸಿಎಂ ಗೋವಿಂದ ಕಾರಜೋಳ್ ಕಾಂಗ್ರೆಸ್ನವರು ನಿರುದ್ಯೋಗಿಗಳಾಗಿ ಖಾಲಿ ಕುಳಿತಿದ್ದಾರೆ. ಹೀಗಾಗಿ ತಮ್ಮ ಅಸ್ತಿತ್ವದ ಸಲುವಾಗಿ ಏನಾದರೂ ಹೇಳಬೇಕು ಅಂತಾ, ಈ ರೀತಿ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಟಾಂಗ್ ನೀಡಿದ್ದಾರೆ.
ಪ್ರವಾಹ ಎದುರಿಸಲು ತಯಾರಿಯಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಮಳೆಯಿಂದ 47 ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಪ್ರವಾಹದಿಂದ 5 ತಾಲೂಕಿನ 51 ಗ್ರಾಮಗಳಿಗೆ ತೊಂದರೆಯಾಗಿದೆ. 26 ಕಾಳಜಿ ಕೇಂದ್ರ ಆರಂಭಿಸಲಾಗಿದ್ದು, 2 ಸಾವಿರ ಜನರು ಆಶ್ರಯ ಪಡೆದಿದ್ದಾರೆ. ಎರಡು ಎನ್ಡಿಆರ್ಎಫ್ ತಂಡಗಳು ಜಿಲ್ಲೆಯಲ್ಲಿವೆ. ಮಳೆಯಿಂದಾಗಿ 224 ಮನೆಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ 36 ಸೇತುವೆ ಮುಳುಗಡೆಯಾಗಿವೆ. ಹೀಗಾಗಿ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಅಧಿಕಾರಿಗಳು ನೀಡುವ ಸೂಚನೆಯನ್ನ ಜನರು ನಿರ್ಲಕ್ಷ್ಯ ಮಾಡಬಾರದು. ಈಗಾಗಲೇ ಜನರ ಸ್ಥಳಾಂತರಕ್ಕಾಗಿ 26 ಬೋಟ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.
ಪ್ರವಾಹ ತಗ್ಗಿಸಲು ಆಲಮಟ್ಟಿ ಆಣೆಕಟ್ಟಿನಿಂದ 3ಲಕ್ಷ 50 ಸಾವಿರ ಕ್ಯೂಸೆಕ್ ನೀರು ಇಂದಿನಿಂದ ಹೊರಗೆ ಬಿಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಘಟಪ್ರಭಾಗೆ 80ಸಾವಿರ ಕ್ಯೂಸೆಕ್ ನೀರು ಹರಿದು ಬಂದರೂ, ಬರೀ 25 ಸಾವಿರ ಕ್ಯೂಸೆಕ್ ನೀರನ್ನು ಹಿಡಕಲ್ ಡ್ಯಾಂನಿಂದ ಹೊರಬಿಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಉತ್ತರ ಕನ್ನಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಯಲ್ಲಿ ಹೆಚ್ಚಿನ ಹಾನಿಯಾಗಿದೆ. ಜನರು ಯಾವುದೇ ಕಾರಣಕ್ಕೂ ಭಯಭೀತರಾಗಬಾರದು. ಜಿಲ್ಲಾಡಳಿತ ಪ್ರವಾಹ ಪರಿಸ್ಥಿತಿ ಎದುರಿಸಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ. ಜಿಲ್ಲೆಯಲ್ಲಿ ಅಂತಹ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಬಂದಿಲ್ಲ. ಒಂದು ವೇಳೆ ಪ್ರವಾಹ ಎದುರಾದರೆ, ಎದುರಿಸಲು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಾರಜೋಳ್ ಅಭಯ ನೀಡಿದ್ದಾರೆ.
ಓದಿ: ವರುಣಾರ್ಭಟಕ್ಕೆ ಉತ್ತರ ಕರ್ನಾಟಕ ತತ್ತರ: ನಾಳೆ ಮುಖ್ಯಮಂತ್ರಿಯಿಂದ ಪರಿಸ್ಥಿತಿ ಅವಲೋಕನ