ಬೆಂಗಳೂರು/ ಬೆಳಗಾವಿ :ಬೆಂಗಳೂರಿನಲ್ಲಿ ಸರ್ಕಾರಿ ಆಸ್ತಿ ಹಾಗೂ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಮಂಗಳವಾರ ಪ್ರಶ್ನೋತ್ತರ ವೇಳೆ ರಾಜರಾಜೇಶ್ವರಿ ನಗರದ ಕ್ಷೇತ್ರದ ಶಾಸಕ ಮುನಿರತ್ನ ಅವರು, ತಮ್ಮ ಕ್ಷೇತ್ರದಲ್ಲಿ ವಾರ್ಡ್ ನಂ. 73 ರಲ್ಲಿ 2 ಎಕರೆಯ ಪಾರ್ಕ್ ಜಾಗ ಒತ್ತುವರಿಯಾಗಿದೆ. ಕೆಲವರು ಪಾರ್ಕ್‍ಗೆ ಬೋರ್ಡ್ ಹಾಕಿದ್ದು, ನ್ಯಾಯಾಲಯದಲ್ಲಿ ನಮ್ಮ ಪರವಾಗಿ ತೀರ್ಪು ಬಂದಿದೆ ಎಂದು ತಿಳಿಸಿದ್ದಾರೆ. ಪ್ರಮೋದ್ ಲೇಔಟ್‍ನಲ್ಲಿ 2 ಎಕರೆ ವಿಸ್ತೀರ್ಣದಲ್ಲಿರುವ ಮತ್ತೊಂದು ಪಾರ್ಕ್‍ನಲ್ಲಿದ್ದ ಸಲಕರಣೆಗಳನ್ನು ರಾತ್ರೋರಾತ್ರಿ ತೆರವು ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಪ್ರಭಾವಿಗಳ ಹೆಸರನ್ನು ಹೇಳುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಇದಕ್ಕೆ ಉತ್ತರಿಸಿದ ಡಿ.ಕೆ ಶಿವಕುಮಾರ್ ಅವರು, ನಿಮಗಿಂತ ಪ್ರಭಾವಿಗಳಿದ್ದಾರೆಯೇ ಎಂದು ಮುನಿರತ್ನ ಅವರನ್ನು ಛೇಡಿಸುತ್ತಲೇ ಯಾರೇ ಸರ್ಕಾರಿ ಬಿಡಿಎ, ಬಿಬಿಎಂಪಿ ಜಾಗಗಳನ್ನು ಒತ್ತುವರಿ ಮಾಡಿಕೊಂಡಿದ್ದರೂ ನಮ್ಮ ಸರ್ಕಾರ ಮುಲಾಜಿಲ್ಲದೇ ಕಠಿಣ ಕ್ರಮ ಜರುಗಿಸುತ್ತದೆ. ಸರ್ಕಾರದ ಆಸ್ತಿ, ರಕ್ಷಣಾ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಒತ್ತುವರಿದಾರರ ವಿರುದ್ಧ ಕಾನೂನಾತ್ಮಕವಾಗಿ ಕಠಿಣ ಕ್ರಮ ಜರುಗಿಸಲಾಗುವುದು. ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ. ನಿರ್ದಿಷ್ಟವಾಗಿ ಯಾವುದೇ ಪ್ರಕರಣಗಳ ವಿರುದ್ಧ ಮಾಹಿತಿ ನೀಡಿದರೆ ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದರು.
ನೆಲ ಬಾಡಿಗೆ ಅನುಕೂಲವಾಗುವ ವಿಧೇಯಕ ಮಂಡನೆ :ಡಿಸೆಂಬರ್ 11 ರಂದುಸೋಮವಾರ ಡಿ.ಕೆ ಶಿವಕುಮಾರ್ ಅವರುಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ಕಟ್ಟಲು ಪಾಲಿಕೆಗೆ ನೆಲಬಾಡಿಗೆ ತೆರಿಗೆ ನೀಡಲು ಅನುಕೂಲವಾಗುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ ಮಂಡಿಸಿದ್ದರು. ಪಾಲಿಕೆ ವ್ಯಾಪ್ತಿಯಲ್ಲಿ ಮನೆ ಕಟ್ಟಲು ರಸ್ತೆ ಮೇಲೆ ಹಾಕುವ ವಸ್ತುಗಳ ಮೇಲೆ ತೆರಿಗೆ ಹಾಕಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಮಾರ್ಗಸೂಚಿ ಮೌಲ್ಯದಲ್ಲಿ ಪರಿಶೀಲನಾ ಶುಲ್ಕ ನೀಡಬೇಕಿದೆ. ಕಟ್ಟಡ ಪರವಾನಗಿ ಶುಲ್ಕ, ಪ್ರಾರಂಭಿಕ ಪ್ರಮಾಣ ಪತ್ರಕ್ಕಾಗಿ ಶುಲ್ಕ ವಿಧಿಸುವ ಅವಕಾಶವನ್ನು ಈ ವಿಧೇಯಕ ಕಲ್ಪಿಸಲಿದೆ.
ಇದನ್ನೂ ಓದಿ :ವಕೀಲರ ಸಂರಕ್ಷಣಾ ವಿಧೇಯಕ ಮಂಡನೆ: ವಕೀಲರ ಮೇಲೆ ಹಲ್ಲೆ ಮಾಡಿದವರಿಗೆ ಗರಿಷ್ಠ 3 ವರ್ಷ ಶಿಕ್ಷೆ, 1 ಲಕ್ಷ ದಂಡ