ಬೆಳಗಾವಿ:ನಿನ್ನೆಯಷ್ಟೇ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ, ಡಿ ಕೆ ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಹೈಕಮಾಂಡ್ ಘೋಷಿಸಿದೆ. ಆದರೆ, ಸಂಪುಟಕ್ಕೆ ಯಾರು ಯಾರು ಸೇರ್ಪಡೆಯಾಗ್ತಾರೆ ಎಂಬುದು ಇನ್ನೂ ನಿರ್ಧಾರ ಆಗಿಲ್ಲ. ಅದಕ್ಕೂ ಮೊದಲೇ ಐದನೇ ಬಾರಿ ಸಚಿವರಾಗಿ ಬೆಳಗಾವಿಗೆ ಆಗಮಿಸುತ್ತಿರುವ ಸತೀಶ್ ಜಾರಕಿಹೊಳಿ ಅವರಿಗೆ ಸ್ವಾಗತ ಎಂದು ಅವರ ಅಭಿಮಾನಿಗಳು ಕಟೌಟ್ ಹಾಕಿದ್ದಾರೆ.
ಹೌದು, ವಿಧಾನಸಭೆ ಚುನಾವಣೆ ಫಲಿತಾಂಶ ಬಂದು ಐದು ದಿನಗಳ ಬಳಿಕ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಕೈ ಹೈಕಮಾಂಡ್ ಘೋಷಿಸಿದೆ. ನಾಳೆ ಸಿದ್ದರಾಮಯ್ಯ ಅವರು 2ನೇ ಬಾರಿ ಮುಖ್ಯಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕಾರಕ್ಕೆ ಕ್ಷಣಗಣನೆ ಶುರುವಾಗಿದೆ.
ಸತೀಶ್ ಜಾರಕಿಹೊಳಿ ಅವರನ್ನು ಸ್ವಾಗತಿಸುವ ಕಟೌಟ್:ಇವರ ಜೊತೆಗೆ ನೂತನ ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇದು ಅಂತಿಮವಾಗಿಲ್ಲ. ಆದರೂ ಕೂಡ ಸತೀಶ್ ಜಾರಕಿಹೊಳಿ ಅವರ ಅಭಿಮಾನಿಗಳು ಮುಂಚಿತವಾಗಿಯೇ ಬೆಳಗಾವಿ ನಗರದ ರಾಣಿ ಚನ್ನಮ್ಮ ವೃತ್ತ, ಕೋರ್ಟ್ ರಸ್ತೆ ಸೇರಿ ಇನ್ನಿತರ ಕಡೆ 5ನೇ ಬಾರಿ ಕರ್ನಾಟಕ ಸರ್ಕಾರದ ಸಂಪುಟ ದರ್ಜೆ ಸಚಿವರಾಗಿ ಪ್ರಪ್ರಥಮ ಬಾರಿಗೆ ಬೆಳಗಾವಿಗೆ ಆಗಮಿಸುತ್ತಿರುವ ಸತೀಶ್ ಜಾರಕಿಹೊಳಿ ಅವರಿಗೆ ಹಾರ್ದಿಕ ಸ್ವಾಗತ ಎಂಬ ಕಟೌಟ್ ಅಳವಡಿಸಿದ್ದಾರೆ.
ಬೆಳಗಾವಿಯ ಯಾರ್ಯಾರಿಗೆ ಸಿಗಬಹುದು ಮಂತ್ರಿ ಸ್ಥಾನ: ಬೆಳಗಾವಿ ಜಿಲ್ಲೆಯಲ್ಲಿ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಸತೀಶ್ ಜಾರಕಿಹೊಳಿ ಅವರಿಗೆ ಈ ಬಾರಿ ಮತ್ತೆ ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿ ಸ್ಥಾನ ಸಿಗುವ ಸಾಧ್ಯತೆಯಿದೆ. ಈಗಾಗಲೇ ಧರ್ಮಸಿಂಗ್, ಸಿದ್ದರಾಮಯ್ಯ, ಕುಮಾರಸ್ವಾಮಿ ಸರ್ಕಾರದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಅನುಭವ ಹಿನ್ನೆಲೆ ಈ ಬಾರಿ ಒಳ್ಳೆಯ ಖಾತೆ ಸಿಗುವ ವಿಶ್ವಾಸದಲ್ಲಿ ಸತೀಶ್ ಜಾರಕಿಹೊಳಿ ಇದ್ದಾರೆ.