ಅಥಣಿ (ಬೆಳಗಾವಿ): ರೋಹಿತ್ ಚಕ್ರತೀರ್ಥ ಅವರು ಇತಿಹಾಸಕ್ಕೆ ಅಪಮಾನ ಆಗುವಂತೆ ಮತ್ತು ಇತಿಹಾಸವನ್ನು ತಿರುಚಿ ಬಹುದೊಡ್ಡ ಅವಮಾನವನ್ನು ಮಾಡಿದ್ದಾರೆ. ಹಾಗಾಗಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಎಂದು ವಕೀಲರು, ಸಾಮಾಜಿಕ ಕಾರ್ಯಕರ್ತರಾಗಿರುವ ಭೀಮನಗೌಡ ಪರಗೌಡ ಅವರು, ಅಥಣಿ ಪೊಲೀಸ್ ಠಾಣೆ ಸಿ.ಪಿ.ಐ ಶಂಕರಗೌಡ ಬಸನಗೌಡ ಅವರ ಮೂಲಕ ಗೃಹ ಇಲಾಖೆ ಕಾರ್ಯದರ್ಶಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಡೈರೆಕ್ಟರ್ ಜನರಲ್ ಇನ್ಸ್ಪೆಕ್ಟರ್ ಆಫ್ ಪೊಲೀಸ್ ಇವರಿಗೆ ದೂರು ನೀಡಿದ್ದಾರೆ.
ರಾಜ್ಯ ಸರ್ಕಾರದ ಪಠ್ಯ ಪರಿಷ್ಕರಣ ಸಮಿತಿ ಅಧ್ಯಕ್ಷರಾಗಿರುವ ರೋಹಿತ್ ಚಕ್ರತೀರ್ಥ ಅವರು, ಇತಿಹಾಸವನ್ನು ತಿರುಚಿ ಲಿಂಗಾಯತ ಧರ್ಮಗುರು ಬಸವಣ್ಣ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್, ಮಹಾಮಾನವತಾವಾದಿ ನಾರಾಯಣ ಗುರುಗಳಿಗೆ ಅವಮಾನ ಮಾಡಿದ್ದಾರೆ. ಅವರು ಬಸವಣ್ಣ, ಅಂಬೇಡ್ಕರ್, ಆರ್ಯ ಸಮಾಜ, ಬ್ರಹ್ಮ ಸಮಾಜ, ಸತ್ಯಶೋಧಕ ಸಮಾಜ, ನಾರಾಯಣ ಗುರು ಚಳುವಳಿ ಹಾಗೂ ಥಿಯೋ ಸೋಫಿಕಲ್ ಸೊಸೈಟಿ ಇವುಗಳ ಬಗೆಗಿನ ಅಧ್ಯಯನವನ್ನು ಕೈಬಿಟ್ಟಿದ್ದಾರೆ. ಇದರಿಂದ ಭವಿಷ್ಯದ ಪೀಳಿಗೆ, ಯುವ ಜನಾಂಗಕ್ಕೆ ತಪ್ಪು ಮಾಹಿತಿ ನೀಡುವ ಮೂಲಕ ಅವರನ್ನು ನೈಜ ಇತಿಹಾಸದಿಂದ ವಂಚಿತರನ್ನಾಗಿ ಮಾಡುವ ಕಾರ್ಯಕ್ಕೆ ಕೈ ಹಾಕಿದ್ದಾರೆಂದು ಆರೋಪಿಸಿದರು.