ಬೆಳಗಾವಿ: ಬೇಸಿಗೆಯಿಂದಾಗಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ನೀರಿನ ಅಗತ್ಯವಿದೆ. ಹಾಗಾಗಿ 5 ಟಿಎಂಸಿ ನೀರು ಬಿಡುಗಡೆ ಕೋರಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಸರ್ಕಾರಕ್ಕೆ ಸಿಎಂ ಸಿದ್ಧರಾಮಯ್ಯ ಪತ್ರ ಬರೆದಿದ್ದಾರೆ. ಕಲಬುರ್ಗಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಲಿರುವುದರಿಂದ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಅನುಕೂಲವಾಗುವಂತೆ ಕೃಷ್ಣಾ ಹಾಗೂ ಭೀಮಾ ನದಿಗಳಿಗೆ ಒಟ್ಟಾರೆ ಐದು ಟಿಎಂಸಿ ನೀರು ಬಿಡುಗಡೆ ಮಾಡಬೇಕು ಎಂದು ಸಿದ್ದರಾಮಯ್ಯ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಈ ಕುರಿತು ಇಂದು ಪತ್ರವನ್ನು ಬರೆದಿದ್ದಾರೆ. ಕುಡಿಯುವ ನೀರಿನ ಅಭಾವದ ಹಿನ್ನೆಲೆಯಲ್ಲಿ ಕೃಷ್ಣಾ ಹಾಗೂ ಭೀಮಾ ನದಿಗಳಿಗೆ ತಲಾ ಮೂರು ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಈ ಮುಂಚೆ ಪತ್ರ ಬರೆಯಲಾಗಿತ್ತು. ಅದಕ್ಕೆ ಸ್ಪಂದಿಸಿ ಮೇ ತಿಂಗಳ ಮೊದಲ ಪಾಕ್ಷಿಕ ಅವಧಿಯಲ್ಲಿ ಕೃಷ್ಣಾ ನದಿಗೆ ಒಂದು ಟಿಎಂಸಿ ನೀರು ಬಿಡುಗಡೆ ಮಾಡಿರುವ ಮಹಾರಾಷ್ಟ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿರುವ ಮುಖ್ಯಮಂತ್ರಿಗಳು, ಉತ್ತರ ಕರ್ನಾಟಕ ಭಾಗದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಮಾನವೀಯತೆ ದೃಷ್ಟಿಯಿಂದ ನೀರು ಹರಿಸಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.
ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ತಪ್ಪಿಸಲು ಮಹಾರಾಷ್ಟ್ರ ರಾಜ್ಯದ ವಾರಣಾ ಮತ್ತು ಕೊಯ್ನಾ ಜಲಾಶಯಗಳಿಂದ 2 ಟಿಎಂಸಿ ಹೆಚ್ಚುವರಿಯಾಗಿ ಕೃಷ್ಣಾ ನದಿಗೆ ಬಿಡುಗಡೆಗೊಳಿಸಬೇಕು. ಅದೇ ರೀತಿ ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ 3 ಟಿಎಂಸಿ ನೀರು ಬಿಡುಗಡೆ ಮಾಡಲು ಸಂಬಂಧಿಸಿದವರಿಗೆ ಕೂಡಲೇ ಸೂಚನೆ ನೀಡಬೇಕು ಎಂದು ಪತ್ರದಲ್ಲಿ ವಿನಂತಿಸಿದ್ದಾರೆ. ಜೂನ್ ಮಾಹೆಯಲ್ಲಿ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲು ಒಟ್ಟಾರೆ ಐದು ಟಿಎಂಸಿ ನೀರು ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ.