ಬೆಳಗಾವಿ :ಹಿಜಾಬ್-ಕೇಸರಿ ಶಾಲು ವಿವಾದ ನ್ಯಾಯಾಲಯದಲ್ಲಿದೆ. ಡೇ ಟು ಡೇ ವಿಚಾರಣೆ ನಡೆಯಲಿದೆ. ರಾಜ್ಯದಲ್ಲಿ ಶಾಂತಿ ನೆಲೆಸಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಈಗಾಗಲೇ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ. ಮಕ್ಕಳಲ್ಲಿ ಯಾವುದೇ ರೀತಿ ಭಿನ್ನಾಭಿಪ್ರಾಯ ಮೂಡಬಾರದು. ಹೈಕೋರ್ಟ್ ಕೂಡ ಇದನ್ನೇ ಹೇಳಿದೆ. ರಾಜ್ಯದಲ್ಲಿ ಶಾಂತಿ ನೆಲೆಸಬೇಕು ಎಂಬುದು ನಮ್ಮ ಮೊದಲನೇ ಆದ್ಯತೆ. ಭಿನ್ನಾಭಿಪ್ರಾಯ ಇಲ್ಲದೇ ಶಾಲಾ-ಕಾಲೇಜು ನಡೆಯಬೇಕು ಎಂದರು.
ಹಿಜಾಬ್-ಕೇಸರಿ ಶಾಲು ವಿವಾದದ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿರುವುದು.. ರಾಜ್ಯ ಬಜೆಟ್ ಪ್ರಕ್ರಿಯೆ ಪ್ರಾರಂಭವಾಗಿದೆ. ಹಲವಾರು ಇಲಾಖೆಗಳ ಸಭೆ ನಡೆಸಲಾಗಿದೆ. ಸೋಮವಾರ, ಮಂಗಳವಾರ ಇನ್ನೆರಡು ದಿನ ಸಭೆ ನಡೆಸುತ್ತೇನೆ. ಇದೆಲ್ಲ ಮುಗಿದ ಮೇಲೆ ಫೆ.25ರ ಬಳಿಕ ಎಲ್ಲಾ ಇಲಾಖೆಗಳ ಬೇಡಿಕೆ ಗಮನಿಸುತ್ತೇನೆ.
ಕೇಂದ್ರ, ರಾಜ್ಯ ಸರ್ಕಾರ ಯೋಜನೆ ಕೂಡ ಗಮನಿಸಿ ಮುಂದಿನ ಬಜೆಟ್ ಮಂಡಿಸುತ್ತೇನೆ. ನಮ್ಮ ಆರ್ಥಿಕ ಸ್ಥಿತಿ, ರಿಸೋರ್ಸ್ ಮೊಬೈಲೈಸೇಷನ್ ಹೆಚ್ಚಳಕ್ಕೆ ಈಗಾಗಲೇ ಆದೇಶ ಕೊಟ್ಟಿದ್ದೇನೆ. ಇದರ ಪ್ರಗತಿ ಪರಿಶೀಲನೆ ಸಭೆಯನ್ನು ನಡೆಸುತ್ತೇನೆ. ಬಜೆಟ್‌ನಲ್ಲಿ ಏನ್ ಮಾಡುತ್ತೇನೆ ಅಂತಾ ಈಗ ಹೇಳಲು ಸಾಧ್ಯವಿಲ್ಲ, ಹೇಳೋದು ಸರಿಯಲ್ಲ ಎಂದರು.
ದೆಹಲಿ ಪ್ರವಾಸದ ವೇಳೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಭೇಟಿ ಮಾಡಿದ್ದೇನೆ. ರಕ್ಷಣಾ ಇಲಾಖೆ ವ್ಯಾಪ್ತಿಯಲ್ಲಿರುವ ಬೆಳಗಾವಿಯಲ್ಲಿನ 750 ಎಕರೆ ಜಾಗದ ಕುರಿತು ಚರ್ಚಿಸಿದ್ದೇನೆ. ಅದರ ಸಂಪೂರ್ಣ ಮಾಹಿತಿ ತರಿಸಿ ಆದಷ್ಟು ಬೇಗ ನಿರ್ಣಯ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.
ಸಂಗೊಳ್ಳಿ ಗ್ರಾಮದಲ್ಲಿನ ಸಂಗೊಳ್ಳಿ ರಾಯಣ್ಣ ಮಿಲಿಟರಿ ಶಾಲೆ ರಕ್ಷಣಾ ಇಲಾಖೆ ಸುಪರ್ದಿ ಪಡೆಯಲು ಮನವಿ ಮಾಡಿದ್ದೇವೆ. ಈ ಕುರಿತು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದರು.