ಬೆಳಗಾವಿ: ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ಚನ್ನಮ್ಮನ ರಾಜ್ಯ ಮಟ್ಟದ ಕಿತ್ತೂರು ಉತ್ಸವ-2023ರ ಭವ್ಯ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸೋಮವಾರ ಬೆಳಿಗ್ಗೆ ಚಾಲನೆ ನೀಡಿದರು. ರಾಜ್ಯದ ವಿವಿಧೆಡೆ ಸಂಚರಿಸಿ ಬೈಲಹೊಂಗಲದಲ್ಲಿ ಇರುವ ಚನ್ನಮ್ಮನ ಸಮಾಧಿ ಸ್ಥಳದಿಂದ ಆಗಮಿಸಿ ಬಂದ ವಿಜಯಜ್ಯೋತಿಯನ್ನು ಕಿತ್ತೂರಿನ ಚನ್ನಮ್ಮ ವೃತ್ತದಲ್ಲಿ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ವಿಜಯಜ್ಯೋತಿಯನ್ನು ಸ್ವಾಗತಿಸಿ, ಸಂಸ್ಥಾನದ ಧ್ವಜಾರೋಹಣವನ್ನು ಸತೀಶ್ ಜಾರಕಿಹೊಳಿ ನೆರವೇರಿಸಿದರು. ನಂತರ ಚನ್ನಮ್ಮ ಪುತ್ಥಳಿಗೆ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಸಂಸದೆ ಮಂಗಲ ಅಂಗಡಿ, ಶಾಸಕರಾದ ಬಾಬಾಸಾಹೇಬ ಪಾಟೀಲ, ಮಹಾಂತೇಶ ಕೌಜಲಗಿ, ಆಸೀಫ್ ಸೇಠ್ ಸೇರಿ ಮತ್ತಿತರ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು.
ಕಿತ್ತೂರು ರಾಜಗುರು ಸಂಸ್ಥಾನದ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚನ್ನಮ್ಮ, ರಾಯಣ್ಣನಿಗೆ ಜೈಕಾರ ಹಾಕುವಾಗ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿ.ಪಂ.ಸಿಇಒ ಹರ್ಷಲ್ ಭೊಯರ್ ಸೇರಿ ಮತ್ತಿತರ ಅಧಿಕಾರಿಗಳು ಇದ್ದರು.
ಇದೇ ವೇಳೆ ಜಾನಪದ ಕಲಾವಾಹಿನಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ ನೀಡಿದರು. ಚನ್ನಮ್ಮನ ಕಿತ್ತೂರಿನ ಮಹಾದ್ವಾರದ ಎರಡೂ ಬದಿಯಲ್ಲಿ ಇರುವ ಸಂಗೊಳ್ಳಿ ರಾಯಣ್ಣ ಹಾಗೂ ಅಮಟೂರ ಬಾಳಪ್ಪ ಅವರ ಕಂಚಿನ ಪುತ್ಥಳಿಗಳಿಗೂ ಗಣ್ಯರು ಮಾಲಾರ್ಪಣೆ ಮಾಡಿದರು. ಫಲ-ಪುಷ್ಪ ಪ್ರದರ್ಶನಕ್ಕೆ ಸಂಸದೆ ಮಂಗಲ ಅಂಗಡಿ ಚಾಲನೆ ನೀಡಿದರೆ, ವಸ್ತು ಪ್ರದರ್ಶನವನ್ನು ಶಾಸಕ ಬಾಬಾಸಾಹೇಬ ಪಾಟೀಲ ಉದ್ಘಾಟಿಸಿದರು.
ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ, "ಸರ್ಕಾರ ಮೂರು ಕೋಟಿ ರೂ.ವರೆಗೆ ಅನುದಾನ ನೀಡಿದೆ. ಮೈಸೂರು ದಸರಾದಂತೆ ಅದ್ದೂರಿಯಾಗಿ ಉತ್ಸವ ಮಾಡ್ತೀವಿ" ಎಂದರು. ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಗೈರಾಗಿರುವ ವಿಚಾರಕ್ಕೆ, ಕೆಲಸದ ನಿಮಿತ್ತ ಬರದೇ ಇರಬಹುದು, ಮುಂದಿನ ಬಾರಿ ಖಂಡಿತಾ ಕರೆಸೋಣ. ಈ ಬಾರಿ ನಾವು, ಸಚಿವರು ಶಾಸಕರು ಸೇರಿದಂತೆ ಅಧಿಕಾರಿಗಳು ಸೇರಿ ಉತ್ಸವ ಮಾಡ್ತೀವಿ ಎಂದರು.